ಬೆಂಗಳೂರು :ಭೂ ಸುಧಾರಣೆ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ನಟ ಹಾಗೂ ಹೋರಾಟಗಾರ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ನಟ ಚೇತನ್, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ದೇವರಾಜ್ ಅರಸ್ ಫೋಟೋ ಬಳಸಿ ಉಳುವವನೇ ಭೂಮಿಯ ಒಡೆಯ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಫೋಟೋ ಬಳಸಿ, ಉಳ್ಳವನೇ ಭೂಮಿ ಒಡೆಯ ಎಂದು ಬರೆದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿ ಕಾಯ್ದೆ ತಿದ್ದುಪಡಿ ಬಗ್ಗೆ ವ್ಯಂಗ್ಯವಾಡಿದ್ದರು.
ಈಟಿವಿ ಭಾರತ ಜೊತೆ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಬಗ್ಗೆ ಎಕ್ಸ್ಕ್ಲ್ಯೂಸಿವ್ ಆಗಿ ಮಾತನಾಡಿರುವ ನಟ ಚೇತನ್, ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಮುಂದಾಗಿರೋದು ನೋವಿನ ಸಂಗತಿ ಎಂದಿದ್ದಾರೆ. ಉಳುವವನೇ ಭೂಮಿಯ ಒಡೆಯ. ಈ ಕಾಯ್ದೆ 70ರ ದಶಕದಲ್ಲಿ ಸಾಮಾಜಿಕ ಹೋರಾಟಗಾರರು ಹೋರಾಟ ಮಾಡಿ ರೈತರಿಗೆ ಬದುಕು ಕಟ್ಟಿಕೊಡುವ ಸಲುವಾಗಿ ಬಂದಿದೆ. ಈಗ ಆ ಕಾಯ್ದೆ ತಿದ್ದುಪಡಿ ಮಾಡುತ್ತಿರೋದು ಸರಿಯಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಬಡವರ ಪರ ಇರ್ತಾರೆ. ಖಾಸಗೀಕರಣದ ಪರ ಹೋಗಲ್ಲ ಎಂದುಕೊಂಡಿದ್ದೆವು. ಆದರೆ, ಈಗ ಯಡಿಯೂರಪ್ಪ ಎಪಿಎಂಸಿಯನ್ನು ಖಾಸಗೀಕರಣ ಮಾಡಿದ್ದಾರೆ ಎಂದರು.
ಎಪಿಎಂಸಿ ಜಾಗಕ್ಕೆ ರಿಲಯನ್ಸ್ ತರದ ಬಂಡವಾಳ ಶಾಹಿಗಳು ಬರುತ್ತಾರೆ. ಇದರಿಂದ ರೈತರಿಗೆ ಕಷ್ಟವಾಗುತ್ತೆ. ಶ್ರೀಮಂತರಿಗೆ, ಭೂ ಹಿಡುವಳಿದಾರರಿಗೆ ಸಹಾಯಕವಾಗುತ್ತದೆ. ಸರ್ಕಾರಗಳು ಎಂದಿಗೂ ರೈತರ ಪರ ಇರಬೇಕೇ ಹೊರತು ಬಂಡವಾಳಶಾಹಿಗಳ ಪರ ಅಲ್ಲ. ಮುಂಚೆ ರೈತರ ಭೂಮಿಯನ್ನು ರೈತರೇ ಕೊಳ್ಳಬೇಕು ಎಂಬ ನಿಯಮ ಇತ್ತು. ಈಗ ಅದನ್ನು ತಿದ್ದುಪಡಿ ಮಾಡಿ ಯಾರು ಬೇಕಾದರೂ ಭೂಮಿ ತೆಗದುಕೊಳ್ಳಬಹುದು ಎಂದು ಹೇಳಿ, ಇವರ ಸ್ನೇಹಿತರಾದ ಬಂಡವಾಳಶಾಹಿಗಳ ಪರ ನಿಂತಿದ್ದಾರೆ. ರಾಜ್ಯ ಸರ್ಕಾರ ಈ ರೀತಿ ಮಾಡುತ್ತಿರುವುದು ರೈತ ವಿರೋಧಿ. ಯಡಿಯೂರಪ್ಪ ಹಸಿರು ಶಾಲು ಹೊದ್ದು ರೈತರ ಪರ ಅನ್ನೋದು ಸುಳ್ಳಾಗಿದೆ. ಕೂಡಲೇ ಯಡಿಯೂರಪ್ಪ ರೈತರ ಪರ ನಿಂತು ಖಾಸಗೀಕರಣ ತೆಗೆಯಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಕೋವಿಡ್-19 ಸಮಯದಲ್ಲಿ ನಾವು ಹೋರಾಟ ಮಾಡಲು ಆಗದ ಸಮಯವನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಸರ್ಕಾರ ರೈತರಿಗೆ ಮಾಡುತ್ತಿರುವ ಮೋಸವನ್ನು ಒಪ್ಪಲು ಸಾಧ್ಯವಿಲ್ಲ. ಇದನ್ನು ಪ್ರಶ್ನೆ ಮಾಡುತ್ತೇವೆ. ರೈತ ಸಂಘಟನೆಗಳು, ರಾಜಕಾರಣಿಗಳು ಈಗ ಮಾತನಾಡಬೇಕು. ರಾಜ್ಯದಲ್ಲಿ ಖಾಸಗೀಕರಣ ಆಗಬಾರದು. ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುವ ಬದಲು ಯಡಿಯೂರಪ್ಪನವರು ತಪ್ಪನ್ನು ತಿದ್ದಿಕೊಂಡು ರೈತರ ಪರ ಎನ್ನುವುದನ್ನು ಸಾಬೀತುಮಾಡಲಿ ಎಂದು ನಟ ಚೇತನ್ ಆಗ್ರಹಿಸಿದ್ದಾರೆ.