ಕೊರೊನಾ ಲಾಕ್ಡೌನ್ ಆರಂಭವಾದಾಗಿನಿಂದ ಕನ್ನಡ ಚಿತ್ರರಂಗದಲ್ಲಿ ನಟ, ನಟಿಯರು, ನಿರ್ದೇಶಕರು ಬಹಳ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ, ರೆಡಿಯೋ ಜಾಕಿ, ನಿರೂಪಕ ವಿನಾಯಕ್ ಜೋಷಿ ಕೂಡಾ ಇಂದು ತಮ್ಮ ಬಾಲ್ಯ ಸ್ನೇಹಿತೆಯನ್ನು ಸರಳವಾಗಿ ಕೈ ಹಿಡಿದಿದ್ದಾರೆ.
ಬಾಲ್ಯದ ಗೆಳತಿ ಜೊತೆ ಹಸೆಮಣೆ ಏರಿದ ನಟ, ನಿರೂಪಕ ವಿನಾಯಕ್ ಜೋಷಿ - Vinayak joshi weds Varsha belavadi
ಬಾಲನಟನಾಗಿ ಹೆಸರು ಮಾಡಿದ್ದ ವಿನಾಯಕ್ ಜೋಷಿ ಇಂದು ತಮ್ಮ ಬಾಲ್ಯದ ಗೆಳತಿ ವರ್ಷಾ ಬೆಳವಾಡಿಯನ್ನು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆ ಆಗಿದ್ದಾರೆ. ವರ್ಷಾ ಬೆಂಗಳೂರಿನ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ವಿನಾಯಕ್ ಜೋಷಿ ತಮ್ಮ ಗೆಳತಿ ವರ್ಷಾ ಜೊತೆ ಇರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಪರಿಚಯ ಮಾಡಿಸಿದ್ದರು. ವರ್ಷಾ ಬೆಳವಾಡಿ ಹಾಗೂ ವಿನಾಯಕ್ ಜೋಷಿ ಬಾಲ್ಯದ ಸ್ನೇಹಿತರು. ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಮದುವೆ ಶಾಸ್ತ್ರಗಳು ಸಂಪ್ರದಾಯಬದ್ಧವಾಗಿ ನಡೆದಿದ್ದು ಬೆಳಗ್ಗೆ 8.45 ರ ಶುಭ ಮುಹೂರ್ತದಲ್ಲಿ ವಿನಾಯಕ್ ಜೋಷಿ ವರ್ಷಾಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ವಿನಾಯಕ್ ಜೋಷಿ ಹಾಗೂ ವರ್ಷಾ ಕುಟುಂಬದವರು ಹಾಗೂ ಆಪ್ತರು ಸೇರಿ ಕೆಲವೇ ಮಂದಿ ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ವರ್ಷಾ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾತಿಯಾಗಿದ್ದು ಸದ್ಯಕ್ಕೆ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮಿಳು ಚಿತ್ರವೊಂದರಲ್ಲಿ ವರ್ಷಾ ಅಭಿನಯಿಸಿದ್ದಾರೆ. ವಿನಾಯಕ್ ಜೋಷಿ 7 ವರ್ಷದವರಿರುವಾಗ ವರ್ಷಾ ಡ್ಯಾನ್ಸ್ ಹೇಳಿಕೊಟ್ಟಿದ್ದರಂತೆ. ನಂತರ ಇಬ್ಬರೂ ಬಹಳ ವರ್ಷಗಳವರೆಗೂ ಭೇಟಿ ಆಗಿರಲಿಲ್ಲವಂತೆ. ಆದರೆ ಮತ್ತೆ 25 ವರ್ಷಗಳ ನಂತರ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಭೇಟಿ ಆಗಿದ್ದಾರೆ. ಕ್ರಮೇಣ ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಗುರು ಹಿರಿಯರ ಒಪ್ಪಿಗೆ ಪಡೆದು ಇಂದು ದೇವಸ್ಥಾನದಲ್ಲಿ ಮದುವೆ ಆಗಿರುವ ವಿನಾಯಕ್ ಜೋಷಿ ಅಭಿಮಾನಿಗಳಿಗಾಗಿ ತಮ್ಮ ಮದುವೆಯನ್ನು ಆನ್ಲೈನ್ನಲ್ಲಿ ನೋಡುವ ವ್ಯವಸ್ಥೆ ಮಾಡಿದ್ದಾರೆ.