ಉದಯ ವಾಹಿನಿಯಲ್ಲಿ ಯಾರಿವಳುಹೊಚ್ಚ ಹೊಸಧಾರಾವಾಹಿ ಆರಂಭವಾಗಿದೆ. ಅದರ ನಾಯಕ ಡಾ. ನಿಖಿಲ್ ಪಾತ್ರದಲ್ಲಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ಆರವ್ ಸೂರ್ಯ.
ಡಾ.ನಿಖಿಲ್ ಪಾತ್ರದಲ್ಲಿ ಕಾಣಿಸಿರುವ ಆರವ್ ಹುಟ್ಟಿದ್ದು ಚಿತ್ರದುರ್ಗವಾದ್ರೇ, ಓದಿ ಬೆಳೆದಿರೋದು ಬಳ್ಳಾರಿ. ಬಾಲ್ಯದಲ್ಲಿ ಗಣೇಶ ಹಬ್ಬದ ದಿನ ಡ್ಯಾನ್ಸ್ ಮಾಡುತ್ತಿದ್ದ ಆರವ್ ಅವರಿಗೆ ಬಣ್ಣದ ಲೋಕದಲ್ಲಿ ಮುಂದುವರಿಯಲು ಅದುವೇ ಪ್ರೇರಣೆ. ಜತೆಗೆ ಆರವ್ ಅವರಿಗೆ ನಟನೆ ರಕ್ತಗತವಾಗಿ ಬಂದುದು ಅಂದರೆ ತಪ್ಪಾಗಲಾರದು. ಯಾಕೆಂದರೆ, ಆರವ್ ಅವರ ತಾತ ಮತ್ತು ಅಜ್ಜಿಯ ನಾಟಕ ನೋಡದ ಜನರಿಲ್ಲ. ಮಾತ್ರವಲ್ಲ ಅವರು ನೀಡಿದ ನಾಟಕ ಪ್ರದರ್ಶಗಳಿಗೆ ಲೆಕ್ಕವಂತೂ ಸಿಗವುದು ತುಂಬಾನೇ ಕಷ್ಟ. ಅಂತಹ ಕಲೆಯ ಕುಟುಂಬದಲ್ಲಿ ಜನಿಸಿದ ಆರವ್ ಕೂಡ ಇದೀಗ ಕಲಾರಾಧನೆ ಮಾಡುತ್ತಿದ್ದಾರೆ.
ನಟನೆಯ ಕುರಿತ ತರಬೇತಿ ಪಡೆದ ಆರವ್ ಅವರು ಮುಂದೆ ಶ್ರೀಚಕ್ರಂ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿದ್ದರು. ತದ ನಂತರ ಹಳ್ಳಿ ಸೊಗಡಿನಲ್ಲೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಇವರು, ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಇವಳೇ ವೀಣಾಪಾಣಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು. ತದ ನಂತರ ನಂದಿನಿ ಧಾರಾವಾಹಿಯಲ್ಲಿ ಬಣ್ಣ ಹಚ್ಚಿರುವ ಆರವ್ ಮಗದೊಮ್ಮೆ ಯಾರಿವಳು ಧಾರಾವಾಹಿಯ ಮೂಲಕ ನಾಯಕನಾಗಿ ಕಮಾಲ್ ಮಾಡಲು ಬರುತ್ತಿದ್ದಾರೆ.
ಸದಾಕಾಲ ಎಲ್ಲರನ್ನು ನಗಿಸುತ್ತಾ, ಸಂತೋಷದಿಂದಿರುವ ನಿಖಿಲ್‌ಗೆ ಜೀವನದಲ್ಲಿರುವುದೇ ಒಂದೇ ಆಸೆ. ನಾಯಕಿ ಮಾಯಾಳನ್ನು ಒಲಿಸಿಕೊಳ್ಳಬೇಕೆಂಬ ಗುರಿ ಇಟ್ಟುಕೊಂಡಿರುವ ಹುಡುಗ ನಿಖಿಲ್‌ಗೆ ಸಣ್ಣ ವಯಸ್ಸಿನಿಂದಲೂ ಮಾಯಾಳನ್ನು ಕಂಡರೆ ತುಂಬಾ ಇಷ್ಟವಿರುತ್ತದೆ. ಡಾಕ್ಟರ್ ಆಗಿರುವ ಆತನಿಗೆ ಅವಳನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುವ ಬಯಕೆ "ಎಂದು ಪಾತ್ರದ ಬಗ್ಗೆ ಹೇಳುತ್ತಾರೆ ಆರವ್ ಸೂರ್ಯ.
ಕೊನೆಯದಾಗಿ ಯಾರಿವಳು ಧಾರಾವಾಹಿ ನಿಜಕ್ಕೂ ಭಿನ್ನವಾಗಿದೆ. ಸಸ್ಪೆನ್ಸ್, ಕಾಮಿಡಿ, ಎಮೋಷನ್ಸ್ ಇರುವಂತಹ ಧಾರಾವಾಹಿಯನ್ನು ಮನೆಮಂದಿಯೆಲ್ಲಾ ಕುಳಿತು ನೋಡಬಹುದು. ಜೊತೆಗೆ ಯಾರಿವಳು ಧಾರಾವಾಹಿಯಲ್ಲಿ ತಂದೆ ಮಗನ ಬಾಂಧವ್ಯ, ತಾಯಿ ಮಗಳ ಸಂಬಂಧ, ಗೆಳೆತನ ಕುರಿತು ತೋರಿಸಲಾಗಿದೆ ಎನ್ನುತ್ತಾರೆ ಆರವ್.