ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಡಿನ ಶೋ ಅಕ್ಷರ ಮಾಲೆಯಲ್ಲಿ ನಿರೂಪಕರಾಗಿ ಮನೆ ಮಾತಾಗಿರುವ ಅಭಿಜಿತ್ ಸದ್ಯ ಕಿರುತೆರೆಯಲ್ಲಿ ಸಖತ್ ಬ್ಯುಸಿ. ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಗಾಯಕ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅಭಿಜಿತ್, ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ವಕೀಲರಾಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು. ಸದ್ಯ ಕಿರುತೆರೆ ಜಗತ್ತಿನಲ್ಲಿ ಬ್ಯುಸಿಯಾಗಿರುವ ಅಭಿಜಿತ್, ತಮ್ಮ ಮನೋಜ್ಞ ಅಭಿನಯದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಸರಸು'ವಿನಲ್ಲಿ ನಾಯಕನ ಅಪ್ಪನ ಪಾತ್ರಕ್ಕೆ ಅಭಿಜಿತ್ ಜೀವ ತುಂಬಲಿದ್ದಾರೆ. ಮಾತ್ರವಲ್ಲ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸ್ವಪ್ನ ಕೃಷ್ಣ ನಿರ್ದೇಶನದ ಸತ್ಯ ಧಾರಾವಾಹಿಯಲ್ಲಿ ಅಭಿಜಿತ್ ಅಭಿನಯಿಸಲಿದ್ದಾರೆ.