ಕನ್ನಡ ಚಿತ್ರರಂಗಕ್ಕೆ ಬರೋಬ್ಬರಿ 86 ವರ್ಷಗಳು ತುಂಬುತ್ತಿದೆ. ಆದರೆ, ಚಂದನವನದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಬಂದಿರುವುದು ತೀರ ವಿರಳ. ಈ ಹಿನ್ನೆಲೆಯಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಕನ್ನಡ ಚಿತ್ರರಂಗದ ಮೇರು ನಟಿಮಣಿಯರ ಒಂದು ಇಣುಕು ನೋಟ ಇಲ್ಲಿದೆ ನೋಡಿ.
ಕನ್ನಡ ಚಿತ್ರರಂಗದಲ್ಲಿ 1934ರಲ್ಲಿ ತೆರೆ ಕಂಡ ಸತಿ ಸುಲೋಚನ ಚಿತ್ರದ ಕಾಲದಿಂದಲೂ ಇಂದಿನ ರಂಗನಾಯಕಿ ಚಿತ್ರದವರೆಗೂ ಕನ್ನಡ ಚಿತ್ರರಂಗದಲ್ಲಿ ನಾಯಕಿ ಪ್ರಧಾನ ಚಿತ್ರಗಳ ನಿರ್ಮಾಣದ ಸಂಖ್ಯೆ ತೀರ ಕಡಿಮೆ. ಇದರ ನಡುವೆ ತಾಂತ್ರಿಕ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಕಾಲದಲ್ಲಿ ಒಂದಷ್ಟು ಮಹಿಳಾ ಪ್ರಧಾನ ಚಿತ್ರಗಳು ಬಂದ್ರೂ ಕೂಡ ಕಮರ್ಷಿಯಲ್ ಚಿತ್ರಗಳ ಅಬ್ಬರದಲ್ಲಿ ಇವು ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ.
ಗುಬ್ಬಿ ವೀರಣ್ಣ ನಾಟಕ ಮಂಡಳಿ ಕಾಲದಿಂದ ಮಹಿಳಾ ಕಲಾವಿದರು ಸಿನಿಮಾಗಳಲ್ಲಿ ಅಭಿನಯಿಸುವುದನ್ನು ಪ್ರಾರಂಭಿಸಿದರು. ನಟಿಯರು ಆ ಕಾಲದಲ್ಲಿ ಅಂಜಿಕೆ ಬಿಟ್ಟು ಬಣ್ಣ ಹಚ್ಚೋಕೆ ಶುರು ಮಾಡಿದ್ರು. ಆದರೆ, ಆರಂಭದ ದಿನಗಳಲ್ಲಿ ಮಹಿಳೆಯರು ನಟನೆ, ಹಾಡು ಮತ್ತು ಕುಣಿತಕ್ಕಷ್ಟೇ ಸೀಮಿತವಾಗಿದ್ದರು. ಯಾವಾಗ ಪುಟ್ಟಣ್ಣ ಕಣಗಾಲ್ ನಾಯಕಿ ಪ್ರಧಾನ ಚಿತ್ರಗಳ ಕಥೆಗೆ ಒತ್ತು ಕೊಟ್ರೋ ಆಗ ಸಿನಿಮಾಗಳಿಗೆ ನಾಯಕಿಯರ ಅಗತ್ಯ ಎದುರಾಯಿತು. ಆ ನಂತರ ಮಹಿಳಾ ಕಲಾವಿದರು ಒಂದಿಷ್ಟು ಮುಖ್ಯ ಭೂಮಿಕೆಗೆ ಹಾಗೂ ನಾಯಕಿಯರಿಗೆ ಬೇಡಿಕೆ ಹೆಚ್ಚಾಯಿತು.
ಎಪ್ಪತ್ತು ಹಾಗು ಎಂಬತ್ತರ ದಶಕದಲ್ಲಿ ಪುಟ್ಟಣ್ಣ ನಿರ್ದೇಶಿಸಿದ ಮಸಣದ ಹೂವು, ರಂಗನಾಯಕಿ, ಸಾಕ್ಷಾತ್ಕಾರ, ಶರಪಂಜರ, ಮಾನಸ ಸರೋವರ ಚಿತ್ರಗಳು ಚಿತ್ರರಂಗದ ದಿಕ್ಕನ್ನೇ ಬದಲಿಸಿದವು. ಅಲ್ಲದೆ ಅಂದಿನ ಸ್ಟಾರ್ ನಟಿಯರಾದ ಆರತಿ, ಜಯಂತಿ, ಪದ್ಮಾವಾಸಂತಿ, ಕಲ್ಪನಾ, ಭಾರತಿ, ಬಿ ಸರೋಜಾದೇವಿ, ಮಂಜುಳ, ಲೀಲಾವತಿಯಂತಹ ಪ್ರಖ್ಯಾತ ನಟಿಯರು ಹುಟ್ಟಿಕೊಂಡ್ರು.