ಮಾಯಾಬಜಾರ್
ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಬ್ಯಾನರ್ ಅಡಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಎಂ. ಗೋವಿಂದು ಜಂಟಿ ನಿರ್ಮಾಣದ ಎರಡನೇ ಸಿನಿಮಾ 'ಮಾಯಾ ಬಜಾರ್' ಇಂದು ಬಿಡುಗಡೆಯಾಗುತ್ತಿದೆ. ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ಮಿದುನ್ ಮುಕುಂದನ್ ಸಂಗೀತ, ಯೋಗರಾಜ್ ಭಟ್ ಹಾಗೂ ಪವನ್ ಗೀತ ಸಾಹಿತ್ಯ ಒದಗಿಸಿದ್ದಾರೆ. ಇದು ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಮೊದಲ ಸಿನಿಮಾ. ಜಗದೀಶ್ ಸಂಕಲನ, ಹರ್ಷ ಹಾಗೂ ಧನು ನೃತ್ಯ ನಿರ್ದೇಶನ ಮಾಡಿದ್ದಾರೆ. ರಾಜ್ ಬಿ. ಶೆಟ್ಟಿ, ವಸಿಷ್ಠ ಎನ್. ಸಿಂಹ, ಚೈತ್ರಾ ರಾವ್, ಪ್ರಕಾಶ್ ರೈ, ಅಚ್ಯುತ್ ಕುಮಾರ್, ಸಾಧು ಕೋಕಿಲ, ಸುಧಾರಾಣಿ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಒಂದು ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಜ್ಜೆ ಹಾಕಿದ್ದಾರೆ.
ಬಿಚ್ಚುಗತ್ತಿ
ಕನ್ನಡ ಚಿತ್ರರಂಗದಲ್ಲಿ ಚರಿತ್ರೆಯ ಪುಟಗಳನ್ನು ತಿರುವು ಹಾಕುವ ಪ್ರಯತ್ನ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಇದೀಗ ಚಿತ್ರದುರ್ಗದ ಮದಕರಿ ವಂಶದ ಬಿಚ್ಚುಗತ್ತಿ ಭರಮಣ್ಣ ನಾಯಕ ಕುರಿತ 'ಬಿಚ್ಚುಗತ್ತಿ' ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಹರಿ ಸಂತೋಷ್ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಭರಮಣ್ಣ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.
ಹೆಸರಾಂತ ಕಾದಂಬರಿಕಾರ ಬಿ.ಎಲ್. ವೇಣು ಅವರ ‘ದಳವಾಯಿ ಮುದ್ದಣ್ಣ’ ಕಾದಂಬರಿ ಭಾಗ 1 ಆಗಿ ತೆರೆ ಮೇಲೆ ಬರುತ್ತಿದೆ. ಹರಿಪ್ರಿಯಾ ಈ ಚಿತ್ರದಲ್ಲಿ ನಾಯಕಿ ಸಿದ್ದಾಂಬೆ ಪಾತ್ರ ನಿರ್ವಹಿಸಿದ್ದಾರೆ. ಬಾಹುಬಲಿ ಖ್ಯಾತಿಯ ಪ್ರಭಾಕರ್ ದಳವಾಯಿ ಮುದ್ದಣ್ಣ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀನಿವಾಸಮೂರ್ತಿ, ಶರತ್ ಲೋಹಿತಾಶ್ವ, ಕಲ್ಯಾಣಿ, ಶಿವರಾಮಣ್ಣ, ರೇಖಾ, ರಮೇಶ್ ಪಂಡಿತ್, ಡಿಂಗ್ರಿ ನಾಗರಾಜ್, ಪ್ರಕಾಶ್ ಹೆಗ್ಗೋಡು, ಸುನೇತ್ರ ಪಂಡಿತ್, ಉಗ್ರಂ ಮಂಜು ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.
ಚಿತ್ರದಲ್ಲಿ ಆರು ಸಾಹಸ ಸನ್ನಿವೇಶಗಳಿದ್ದು ರವಿವರ್ಮ, ವಿಜಯ್, ವಿನೋದ್, ಸಣ್ಣಪ್ಪ ಹಾಗೂ ವಿಕ್ರಮ್ ಫೈಟ್ ಕೊರಿಯೋಗ್ರಫಿ ಮಾಡಿದ್ದಾರೆ. ಶ್ರೀ ಕೃಷ್ಣ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾಗೆ ಕೆ.ಎಂ. ಪ್ರಕಾಶ್ ಸಂಕಲನ, ಎಡ್ವರ್ಡ್ ಕೆನಡಿ ಕಲಾ ನಿರ್ದೇಶನ, ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಗುರು ಪ್ರಶಾಂತ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.
ಓ ಪುಷ್ಪ ಐ ಹೇಟ್ ಟಿಯರ್ಸ್
'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಖ್ಯಾತರಾದ, ಬಿಗ್ಬಾಸ್ ಮಾಜಿ ಸ್ಪರ್ಧಿ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ನಟಿಸಿರುವ 'ಓ ಪುಷ್ಪ ಐ ಹೇಟ್ ಟಿಯರ್ಸ್' ಸಿನಿಮಾ ಇಂದು ತೆರೆ ಕಾಣುತ್ತಿದೆ. ಈ ಸಿನಿಮಾ ಹಿಂದಿ ಭಾಷೆಯಲ್ಲಿ ತಯಾರಾಗಿದ್ದು ಹಿಂದಿಗೆ ಡಬ್ ಆಗಿದೆ. 'ಸಿಯಾ ಕಿ ರಾಮ್' ಹಿಂದಿ ಮೆಗಾ ಧಾರಾವಾಹಿ ಮೂಲಕ ರಾವಣ ಆಗಿ ಘರ್ಜಿಸಿದ್ದ ಜೆಕೆ ಈ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಇದು ಥ್ರಿಲ್ಲರ್ ಸಿನಿಮಾ ಕೂಡಾ ಎನ್ನಲಾಗಿದ್ದು ದಿನಕರ್ ಕಪೂರ್ ನಿರ್ದೇಶನದ ಸಿನಿಮಾವನ್ನು ಅಮೂಲ್ಯ ದಾಸ್ ನಿರ್ಮಿಸಿದ್ದಾರೆ.