ಈ ವಾರ 5 ಕನ್ನಡ ಸಿನಿಮಾಗಳು ತೆರೆ ಕಾಣುತ್ತಿವೆ. ಈಗ ಕನ್ನಡ ಸಿನಿಮಾಗಳು ಪರಭಾಷಾ ಸಿನಿಮಾಗಳ ಮುಂದೆ ಗೆಲುವು ಸಾಧಿಸಬೇಕಿದೆ. ಒಂದು ವರ್ಷದಲ್ಲಿ ಸುಮಾರು 1,000 ಸಿನಿಮಾಗಳು ರಾಜ್ಯದಲ್ಲಿ ಬಿಡುಗಡೆಯಾದರೆ ಅವುಗಳಲ್ಲಿ 200 ಕನ್ನಡ ಸಿನಿಮಾಗಳು ಹಾಗೂ 800 ಪರಭಾಷಾ ಚಿತ್ರಗಳಾಗಿರುತ್ತವೆ. ಇಂತಹ ಪರಿಸ್ಥಿತಿ ಬೇರಾವ ರಾಜ್ಯದಲ್ಲೂ ಇಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ.
ಆಪರೇಷನ್ ನಕ್ಷತ್ರ
ಯಜ್ಞಾಶೆಟ್ಟಿ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಆಪರೇಷನ್ ನಕ್ಷತ್ರ' ಈ ವಾರ ಬಿಡುಗಡೆಯಾಗುತ್ತಿದೆ. ಫೈವ್ಸ್ಟಾರ್ ಫಿಲಮ್ಸ್ ಬ್ಯಾನರ್ ಅಡಿ ತಯಾರಾಗುತ್ತಿರುವ ಈ ಸಿನಿಮಾ ಥ್ರಿಲ್ಲರ್ ಕಥಾ ವಸ್ತು ಹೊಂದಿದೆ. ನಂದಕುಮಾರ್. ಎನ್ , ಅರವಿಂದ್ ಮೂರ್ತಿ, ಟಿ.ಎಸ್.ರಾಧಾಕೃಷ್ಣ ಹಾಗೂ ಸಿ.ಎಸ್.ಕಿಶೋರ್ ಮೇಗಳಮನೆ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ನಿರ್ದೇಶಕ ಮಧುಸೂಧನ್. ನಾವು ಯಾರಿಗಾದರೂ ಮೋಸ ಮಾಡಿದರೆ ನಮ್ಮ ಬೆನ್ನ ಹಿಂದೆ ನಮಗೆ ಮೋಸ ಮಾಡುವವರು ಕಾಯುತ್ತಾ ಇರುತ್ತಾರೆ ಎಂಬ ವಿಚಾರವನ್ನು ನಿರ್ದೇಶಕ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ಪತ್ರಕರ್ತ ವಿಜಯ ಭರಮಸಾಗರ ಈ ಚಿತ್ರಕ್ಕೆ ಗೀತೆಗಳನ್ನು ಬರೆದಿದ್ದಾರೆ. ಅರ್ಜುನ್ ಕಿಟ್ಟಿ ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ಕಂಬಿ ರಾಜು ನೃತ್ಯ ನಿರ್ದೇಶನ ಇದೆ.
ನಿರಂಜನ್ ಒಡೆಯರ್, ದೀಪಕ್ ರಾಜ್ ಶೆಟ್ಟಿ, ಶ್ರೀನಿವಾಸ ಪ್ರಭು, ಗೋವಿಂದೇಗೌಡ, ವಿಕ್ಟರಿ ವಾಸು, ಪ್ರಶಾಂತ್ ನಟನ, ವಿಜಯಲಕ್ಷ್ಮಿ, ಅರವಿಂದ್ ಮೂರ್ತಿ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
ಯಾನ
ವಿಜಯಲಕ್ಷ್ಮಿ ಸಿಂಗ್ ಹಾಗೂ ಜೈ ಜಗದೀಶ್ ದಂಪತಿಯ ಮೂವರು ಪುತ್ರಿಯರು ನಟಿಸಿರುವ ಚೊಚ್ಚಲ ಸಿನಿಮಾ. ಈ ಮೂಲಕ ಶಂಕರ್ ಸಿಂಗ್ ಹಾಗೂ ಪ್ರತಿಮಾದೇವಿ ಅವರ ಮೂರನೇ ತಲೆಮಾರು ಸ್ಯಾಂಡಲ್ವುಡ್ಗೆ ಆಗಮಿಸಿದೆ. ವೈಸಿರಿ, ವೈಭವಿ, ವೈನಿಧಿ ಈ ಮೂವರೂ ನಟಿಯರು ಯಾನ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂವರು ನಾಯಕಿಯರ ಜೊತೆ ರಂಗಭೂಮಿ ಹಾಗೂ ಹಿರಿಯ ನಟ ಶಶಿಕುಮಾರ್ (ಹೀರೋ ಶಶಿಕುಮಾರ್ ಅಲ್ಲ) ಪುತ್ರ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್ ಕೂಡಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ದುಬೈನ ಹರೀಶ್ ಷೆರೀಗರ್ ಹಾಗೂ ಶರ್ಮಿಳ ಷೆರೀಗರ್ ಐ ಎಂಟರ್ಟೈನ್ಮೆಂಟ್ ಹಾಗೂ ಅಕ್ಮೆ ಮೂವೀಸ್ ಇಂಟರ್ನ್ಯಾಷನಲ್ ಅಡಿಯಲ್ಲಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಶ್ರೀಮತಿ ವಿಜಯಲಕ್ಷ್ಮಿ ಸಿಂಗ್ ಅವರೇ ಮಕ್ಕಳ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಬಹಳ ವರ್ಷಗಳ ನಂತರ ಅನಂತ್ನಾಗ್ ಹಾಗೂ ಸುಹಾಸಿನಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರಾಮಕೃಷ್ಣ, ಸುಂದರ್ ರಾಜ್, ವೀಣಾ ಸುಂದರ್, ಎಂ.ಎನ್. ಲಕ್ಷ್ಮಿದೇವಿ ಹಾಗೂ ಇತರರು ನಟಿಸಿದ್ದಾರೆ.