'ಗೀತಾ'
ಗೋಲ್ಡನ್ ಸ್ಟಾರ್ ಗಣೇಶ್ ಮೂವರು ನಾಯಕಿಯರೊಂದಿಗೆ ಅಭಿನಯಿಸಿರುವ, 1980ರ ಗೋಕಾಕ್ ಚಳವಳಿ ಹಿನ್ನೆಲೆ ಇರುವ ಸಿನಿಮಾ 'ಗೀತಾ' ಈ ವಾರ ಬಿಡುಗಡೆಯಾಗುತ್ತಿದೆ. 1981 ಏಪ್ರಿಲ್ 8 ರಂದು ಶಂಕರ್ ನಾಗ್ ಅಭಿನಯದ ‘ಗೀತಾ’ ಸಿನಿಮಾ ಬಿಡುಗಡೆ ಆಗಿತ್ತು. ಸುಮಾರು 38 ವರ್ಷಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರ 38 ಸಿನಿಮಾ ಆಗಿ ಅದೇ ಹೆಸರಿನಲ್ಲಿ 'ಗೀತಾ' ಬಿಡುಗಡೆ ಆಗುತ್ತಿದೆ. ಎಸ್.ಎಸ್. ಫಿಲಮ್ಸ್ ಜೊತೆ ಗೋಲ್ಡನ್ ಮೂವೀಸ್ ಸಹ ನಿರ್ಮಾಣದಲ್ಲಿ ಸಯ್ಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ವಿಜಯ್ ನಾಗೇಂದ್ರ ಈ ಸಿನಿಮಾದಿಂದ ಸ್ವತಂತ್ರ ನಿರ್ದೇಶಕರಾಗಿ ಪರಿಚಯ ಆಗುತ್ತಿದ್ದಾರೆ. ಈ ಮುನ್ನ ಗಜಕೇಸರಿ, ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ, ರಾಜಕುಮಾರ ಸಿನಿಮಾಗಳಿಗೆ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ‘ಗೀತಾ’ ಚಿತ್ರದ ಕಥೆ, ಸಂಭಾಷಣೆ, ಹಾಡುಗಳಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಪಾತ್ರ ಕೂಡಾ ಇದೆ. ನಾಗೇಂದ್ರ ಬಿ.ಎಂ. ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಆರು ಹಾಡುಗಳಿಗೆ ಅನೂಪ್ ರುಬೆನ್ಸ್ ಸಂಗೀತ ನೀಡಿದ್ದಾರೆ. ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ಕುಮಾರ್ ಭಾಗವಹಿಸಿದ್ದ ಕೆಲವೊಂದು ವಿಡಿಯೋ ತುಣುಕುಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಗಣೇಶ್ ಎರಡು ಶೇಡ್ಗಳಲ್ಲಿ ನಟಿಸಿದ್ದು ಪಾರ್ವತಿ ಅರುಣ್, ಪ್ರಯಾಗ ಮಾರ್ಟಿನ್ ಹಾಗೂ ಶಾನ್ವಿ ಶ್ರೀವಾತ್ಸವ್ ನಾಯಕಿಯರಾಗಿ ನಟಿಸಿದ್ದಾರೆ. ಸುಧಾರಾಣಿ, ದೇವರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.
‘ಕಿಸ್’
ಅಂಬಾರಿ, ಐರಾವತ, ರಾಟೆ ಖ್ಯಾತಿಯ ನಿರ್ದೇಶಕ ಎ.ಪಿ. ಅರ್ಜುನ್ ನಿರ್ಮಿಸಿ, ನಿರ್ದೇಶಿಸಿರುವ 'ಕಿಸ್' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಅರ್ಜುನ್ ಅವರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಬಜೆಟ್ ಹಾಗೂ ಹೊಸ ನಾಯಕ, ನಾಯಕಿ ಇರುವ ಸಿನಿಮಾ ಇದು. ಶ್ರೀಮಂತ ಹುಡುಗ ಅರ್ಜುನ್ ಪಾತ್ರದಲ್ಲಿ ವಿರಾಟ್ ಹಾಗೂ ಮುದ್ದಾದ, ಚೂಟಿ ಹುಡುಗಿ ನಂದಿನಿ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಇದು ಪ್ರೀತಿಸುವ ಹೃದಯಗಳಿಗಾಗಿ ತಯಾರಾಗಿರುವ ಸಿನಿಮಾ. ‘ಕಿಸ್’ ಅಂದಾಕ್ಷಣ ಯಾವ ಮುಜುಗರ ಪಡಬೇಕಾಗಿಲ್ಲ. KISS ಎಂದರೆ ’ಕೀಪ್ ಇಟ್ ಸಿಂಪಲ್ ಅ್ಯಂಡ್ ಶಾರ್ಟ್’ ಎಂಬ ಅರ್ಥ ಎಂದು ನಿರ್ದೇಶಕ ಅರ್ಜುನ್ ಹೇಳಿದ್ದಾರೆ. ಬೆಂಗಳೂರು, ಮಡಿಕೇರಿ, ಹೃಷಿಕೇಷ್, ಊಟಿ, ಕುದುರೆಮುಖ, ಕೇರಳ, ಗೋವಾ, ಡಾರ್ಜಲಿಂಗ್ ಸೇರಿ ವಿದೇಶದಲ್ಲಿ ಕೂಡಾ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕಾಗಿ ಯುವನಟ ವಿರಾಟ್ ಬಂಗಿ ಜಂಪ್ ಮಾಡಿರುವುದು ವಿಶೇಷ.