''ಭಜರಂಗಿ 2'' ಕನ್ನಡ ಚಿತ್ರರಂಗವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಸಿನಿಮಾ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಭಿನ್ನ ಶೇಡ್ನಲ್ಲಿ ಕಾಣಿಸಿರುವ ಭಜರಂಗಿ-2 ಟ್ರೈಲರ್ ಹಾಗೂ ಹಾಡುಗಳಿಂದಲೇ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.
ಇದೇ ಅಕ್ಟೋಬರ್ 29ಕ್ಕೆ ಭಜರಂಗಿ 2 ಬಿಡುಗಡೆ ಆಗುತ್ತಿರುವ ಹಿನ್ನೆಲೆ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅತಿಥಿಗಳಾಗಿ ಬಂದಿದ್ದರು. ಒಂದೇ ವೇದಿಕೆ ಮೇಲೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್ ಅವರನ್ನು ಒಟ್ಟಿಗೆ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಕ್ತು.
ಈ ವೇಳೆ ಮಾತನಾಡಿದ ಪುನೀತ್ ರಾಜ್ ಕುಮಾರ್, ನಾನು ಶಿವಣ್ಣರ ಮೊದಲ ಅಭಿಮಾನಿ. ಅವರು ಹೆಚ್ಚಾಗಿ ಹಳ್ಳಿ ಪಾತ್ರಗಳಲ್ಲಿ ನನಗೆ ತುಂಬಾ ಇಷ್ಟ ಆಗ್ತಾರೆ. ಜೊತೆಗೆ ಶಿವಣ್ಣನಲ್ಲಿರುವ ಎನರ್ಜಿ ತುಂಬಾನೇ ಇಷ್ಟ ಆಗುತ್ತೆ ಅಂತಾ ಹೇಳುವ ಮೂಲಕ ಪವರ್ ಸ್ಟಾರ್ ಇಡೀ ಭಜರಂಗಿ 2 ಚಿತ್ರ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಶಿವಣ್ಣ ಹಾಗೂ ಪುನೀತ್ ಅವ್ರ ಸಿನಿಮಾಗಳನ್ನು ನೋಡಿ ಸ್ಫೂರ್ತಿಗೊಂಡು ನಾನು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾನೇ ಗೌರವ ಕೊಡುವುದರ ಜೊತೆಗೆ ಇಷ್ಟ ಪಡುವ ವ್ಯಕ್ತಿಗಳು ಅಂದ್ರೆ ಅದು ಶಿವಣ್ಣ ಮತ್ತು ಪುನೀತ್ ರಾಜ್ ಕುಮಾರ್ ಅಂತಾ ಹೇಳುವ ಮೂಲಕ ಅಣ್ಣಾವ್ರ ಕುಟುಂಬದ ಜೊತೆಗಿನ ಒಡನಾಟವನ್ನು ಯಶ್ ಹಂಚಿಕೊಂಡರು.
ಕೊನೆಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಯಶ್ರನ್ನು ಹಾಡಿ ಹೊಗಳಿದರು. ಯಶ್ ಇಂದು ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ಮಟ್ಟಕ್ಕೆ ಬೆಳದರೂ ಕೂಡ ಯಶ್ ಮೊದಲು ಹೇಗಿದ್ದರೋ ಹಾಗೇ ಇದ್ದಾರೆ. ಯಶ್ಗೆ ಯಾವುದೇ ಜಂಬ ಇಲ್ಲ. ಒಳ್ಳೆಯತನ ಇದೆ. ಯಶ್ ಅವರನ್ನು ನೋಡಿದ್ರೆ ಖುಷಿಯಾಗುತ್ತೆ, ಹ್ಯಾಂಡ್ ಸಮ್ ಆಗಿ ಇರ್ತಾರೆ ಅಂತಾ ಶಿವರಾಜ್ ಕುಮಾರ್ ಯಶ್ ಬಗ್ಗೆ ಕೊಂಡಾಡಿದರು.