2019, ಸ್ಯಾಂಡಲ್ವುಡ್ನಲ್ಲಿ ಅತಿ ಹೆಚ್ಚು ಸಿನಿಮಾಗಳು ನಿರ್ಮಾಣ ಆದ ವರ್ಷ ಎಂಬ ಹೆಗ್ಗಳಿಕೆ ಪಡೆದಿದೆ. ಈ ವರ್ಷದ ಹೊಸ್ತಿಲಲ್ಲಿ ಕನ್ನಡ ಚಿತ್ರರಂಗದ ಕೋಟಿ ವಿತರಕ ಎನ್. ಪ್ರಸಾದ್ ಕಿಡ್ನಿ ವೈಫಲ್ಯದಿಂದ ಇಹಲೋಕ ತ್ಯಜಿಸಿದರು. ಸ್ಯಾಂಡಲ್ವುಡ್ನಲ್ಲಿ ಕಡಿಮೆ ಸಮಯದಲ್ಲಿ ಅಣ್ಣಾಬಾಂಡ್, ಗಾಡ್ ಫಾದರ್, ಭೀಮಾ ತೀರದಲ್ಲಿ, ಚಿಂಗಾರಿ, ಚಂದ್ರ ಹೀಗೆ ಹಲವು ದೊಡ್ಡ ಸ್ಟಾರ್ಗಳ ಸಿನಿಮಾಗಳನ್ನು ಕೋಟಿ ಕೋಟಿ ಕೊಟ್ಟು ವಿತರಣೆ ಮಾಡುವ ಮೂಲಕ ರಾತ್ರೋರಾತ್ರಿ ಕೋಟಿ ವಿತರಕ ಅನಿಸಿಕೊಂಡಿದ್ದರು. ಎನ್.ಪ್ರಸಾದ್ ಸಾವು ಚಿತ್ರರಂಗಕ್ಕೆ ಶಾಕಿಂಗ್ ನ್ಯೂಸ್ ಆಗಿತ್ತು. ಕಿಡ್ನಿ ವೈಫಲ್ಯದಿಂದ ಜನವರಿ 6ರಂದು ಎನ್.ಪ್ರಸಾದ್ ನಿಧನರಾದರು.
ಪ್ರಸಾದ್ ನಂತರ ಕನ್ನಡ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕಿ ಜಯಶ್ರೀದೇವಿ ಕೂಡಾ ಬಾರದ ಲೋಕಕ್ಕೆ ತೆರೆಳಿದರು. ಎಮ್ಮೆ ತಮ್ಮಣ್ಣ, ಕೊಟ್ರೇಶಿ ಕನಸು, ನಾಗಮಂಡಲ, ನಮ್ಮೂರ ಮಂದಾರ ಹೂವೆ, ಅಮೃತ ವರ್ಷಿಣಿ, ಶ್ರೀ ಮಂಜುನಾಥ, ಹಬ್ಬ, ಸ್ನೇಹ ಲೋಕ, ಮುಕುಂದ ಮುರಾರಿ, ಹೀಗೆ ಬಿಗ್ ಬಜೆಟ್ ಹಾಗೂ ದೊಡ್ಡ ಸ್ಟಾರ್ಗಳ ಸಿನಿಮಾ ನಿರ್ಮಾಣ ಮಾಡಿದ ಖ್ಯಾತಿ ಜಯಶ್ರೀ ದೇವಿಗೆ ಸಲ್ಲುತ್ತದೆ. ಆದರೆ ಫೆಬ್ರವರಿ 13ರಂದು ಜಯಶ್ರೀ ದೇವಿಯ ಸಾವಿನ ಸುದ್ದಿ ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲು ಆಗಲಿಲ್ಲ. ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದ ಜಯಶ್ರೀ ಅವರಿಗೆ 60 ವರ್ಷ ವಯಸ್ಸಾಗಿತ್ತು.
ಇನ್ನು ರಂಗಕರ್ಮಿ, ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ ಕೂಡಾ ಮೇ 2ರಂದು ಅನಾರೋಗ್ಯದಿಂದ ಸಾವನ್ನಪ್ಪಿದರು. ನಾಟಕಗಳಿಂದಲೇ ಭ್ರಷ್ಟಾಚಾರಿಗಳು ಹಾಗೂ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸುತ್ತಿದ್ದ ಚಾಣಕ್ಯ ಅವರು. ಅನಾರೋಗ್ಯದಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ವಿಧಿವಶರಾದರು.
ಮಾಸ್ಟರ್ ಹಿರಣ್ಣಯ್ಯ ನಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಜೂನ್ 10ರಂದು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹೀಗೆ ಬಹುಭಾಷೆ ಸಿನಿಮಾಗಳಲ್ಲಿ ಗಿರೀಶ್ ಕಾರ್ನಾಡ್ ಅಭಿನಯಿಸಿ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದಾಗಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ನಿಧನ ಸುದ್ದಿ ಕನ್ನಡ ಚಿತ್ರರಂಗ ಅಲ್ಲದೆ ಇಡೀ ದಕ್ಷಿಣ ಸಿನಿಮಾರಂಗಕ್ಕೆ ಆಘಾತ ಉಂಟು ಮಾಡಿತ್ತು.