ಅಂತೂ ಇಂತು 20 ವಾರಗಳ ಸರಿಗಮಪ 15ನೇ ಸೀಸನ್ ಕಾರ್ಯಕ್ರಮಕ್ಕೆ ತೆರೆ ಬೀಳುತ್ತಿದೆ. ನಾಳೆ ಅಂದರೆ ಫೆಬ್ರವರಿ 23ರಂದು ಶನಿವಾರ ರಾತ್ರಿ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮದ ಅಂತಿಮ ಹಣಾಹಣಿ ನಡೆಯುತ್ತಿದೆ.
ಖಾಸಗಿ ವಾಹಿನಿಯ ಈ ಮ್ಯೂಜಿಕಲ್ ಶೋ ಕನ್ನಡ ರಾಜ್ಯಾದ್ಯಂತ ಮನೆಮಾತಾಗಿದೆ. ನಾದಬ್ರಹ್ಮ ಹಂಸಲೇಖ ಈ ಕಾರ್ಯಕ್ರಮದ ಮಹಾಗುರು. ರಾಜೇಶ್ ಕೃಷ್ಣನ್, ವಿಜಯಪ್ರಕಾಶ್ ಹಾಗೂ ಅರ್ಜುನ್ ಜನ್ಯ ಕೂಡಾ ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ.
ಈ ಕಾರ್ಯಕ್ರಮದ ಆರಂಭದಲ್ಲಿ 20 ಸ್ಪರ್ಧಿಗಳಿದ್ದು, ಕಾರ್ಯಕ್ರಮ 20 ಕಂತು ಮುಗಿಸಿದೆ. ಅಂತಿಮ ಹಂತಕ್ಕೆ 6 ಸ್ಪರ್ಧಿಗಳು ತಲುಪಿದ್ದಾರೆ. ಹಾವೇರಿ ಜಿಲ್ಲೆಯ ಕುರಿಗಾಹಿ ಹನುಮಂತ, ವಿಜೇತ್, ಕೀರ್ತನ್ ಹೊಳ್ಳ, ಸಾಧ್ವಿಕ್, ನೀಹಾಲ್, ಋತ್ವಿಕ್ ನಡುವೆ ಈ ಪೈಪೋಟಿ ನಡೆಯಲಿದೆ.
ಈ ಸ್ಪರ್ಧೆಯಲ್ಲಿ ಗೆದ್ದವರಿಗೆ 35 ಲಕ್ಷ ರೂಪಾಯಿ ಬೆಲೆಯ ಫ್ಲಾಟ್ ಬಹುಮಾನವಾಗಿ ಸಿಗಲಿದೆ. ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದ್ದು, ಶನಿವಾರ ಸಂಜೆ 6 ಗಂಟೆಯಿಂದ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವೇದಿಕೆ ಸಜ್ಜಾಗಿದೆ. ಜೀ ವಾಹಿನಿಯಲ್ಲಿ ಆ ದಿನ ನೇರ ಪ್ರಸಾರ ಆಗಲಿದೆ.