ಬೆಂಗಳೂರು: ಕನ್ನಡ ಚಿತ್ರರಂಗದ ರಾಜರತ್ನ, ದೊಡ್ಮನೆ ನಂದಾದೀಪ ಆರಿ ಹೋಗಿ ಇಂದಿಗೆ 12ನೇ ದಿನ. ಅಣ್ಣಾವ್ರ ಕಾಲದಿಂದಲೂ ಅಭಿಮಾನಿಗಳನ್ನು ದೇವರು ಎಂದು ಕರೆದ ಕುಟುಂಬ ರಾಜ್ ಕುಟುಂಬ. ಅಭಿಮಾನಿಗಳೆಂದರೆ ಅಪ್ಪುಗೆ ಎಲ್ಲಿಲ್ಲದ ಪ್ರೀತಿ. ಪುನೀತ್ ನಿಧನದ ನಂತರ ಅಪಾರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಲು ದೊಡ್ಮನೆ ಕುಟುಂಬ ವ್ಯವಸ್ಥೆ ಮಾಡಿತ್ತು.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಇಂದು (ನ.9) ಅರಮನೆ ಮೈದಾನದ ತ್ರಿಪುರವಾಸಿನಿ ಅಂಗಣದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆಯನ್ನು ರಾಜ್ಕುಮಾರ್ ಕುಟುಂಬ ಏರ್ಪಡಿಸಿತ್ತು. ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ, ಸಹೋದರರಾದ ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸುವ ಮೂಲಕ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
ವೆಜ್ ಮತ್ತು ನಾನ್ ವೆಜ್ ಊಟ:
ಪುನೀತ್ ಪುಣ್ಯಸ್ಮರಣೆಯ ನಿಮಿತ್ತ ಸುಮಾರು 25 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಸಂಖ್ಯೆ ಹೆಚ್ಚಾದರೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು. ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ರೀತಿಯ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇಂದು 40 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಪುನೀತ್ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಸಾವಿರ ಬಾಣಸಿದರಿಂದ ಅಡುಗೆ ತಯಾರಿ:
ಸುಮಾರು 1 ಸಾವಿರ ಬಾಣಸಿಗರು ಅಡುಗೆ ರೆಡಿ ಮಾಡಿದ್ದರು. 1 ಸಾವಿರ ಕೆಜಿ ಸೋನಾ ಮಸೂರಿ ಅಕ್ಕಿ, 750 ಲೀ ಅಡುಗೆ ಎಣ್ಣೆ, ಕೆಜಿಗಟ್ಟಲೆ ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ, ಪುದೀನಾ, ಕೊತ್ತಂಬರಿ ಸೊಪ್ಪು, 3 ಸಾವಿರ ಕೆಜಿ ಚಿಕನ್, 8,500 ಕೋಳಿ ಮೊಟ್ಟೆ ಬಳಸಿ ಅಡುಗೆ ತಯಾರಿಸಲಾಗಿತ್ತು.
ನಾನ್ ವೆಜ್ ಪ್ರಿಯರಿಗೆ ಕೋಳಿ ಮೊಟ್ಟೆ, ಚಿಕನ್ ಕಬಾಬ್, ಚಿಕನ್ ಚಾಪ್ಸ್, ಘೀ ರೈಸ್, ಅನ್ನ-ರಸಂ ಮತ್ತು ಸಸ್ಯಾಹಾರಿ ಅಡುಗೆಯಲ್ಲಿ ಆಲೂ ಕಬಾಬ್, ಬೇಬಿ ಕಾರ್ನ್, ಘೀ ರೈಸ್-ಕುರ್ಮ, ಅನ್ನ-ರಸಂ, ಅಕ್ಕಿ ಪಾಯಸ, ಮಸಾಲೆ ವಡೆ ಮಾಡಲಾಗಿತ್ತು.