ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಪಾರ್ಥಿವ ಶರೀರವೊಂದನ್ನು ಹೊತ್ತೊಯ್ಯುತ್ತಿರುವ ಈ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಬಹಳಷ್ಟು ಮಂದಿಗೆ ಅವರು ಹೊತ್ತೊಯ್ಯುತ್ತಿರುವುದು ಯಾರ ಶರೀರವನ್ನು ಎಂಬ ಅನುಮಾನ ಕಾಡಿತ್ತು.
ಅಂತ್ಯಕ್ರಿಯೆಗೆ ತೆರಳುತ್ತಿರುವ ಅಮಿತಾಬ್ ಬಚ್ಚನ್, ಐಶ್ವರ್ಯ ಸುಮಾರು 40 ವರ್ಷಗಳಿಂದ ಬಿಗ್ ಬಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದ ಶೀತಲ್ ಜೈನ್ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಶನಿವಾರ ಸಂಜೆ ಮುಂಬೈನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಭಾನುವಾರ ಸಂಜೆ ಅವರ ಅಂತ್ಯಕ್ರಿಯೆ ನೆರವೇರಿದ್ದು ಅಮಿತಾಬ್, ಅಭಿಷೇಕ್, ಐಶ್ವರ್ಯ ರೈ ಸೇರಿದಂತೆ ಅಮಿತಾಬ್ ಕುಟುಂಬದ ಎಲ್ಲಾ ಸದಸ್ಯರು ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಅಮಿತಾಬ್ ಹಾಗೂ ಪುತ್ರ ಅಭಿಷೇಕ್ ಇಬ್ಬರೂ ಶೀತಲ್ ಜೈನ್ ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೂಡಾ ನೀಡಿದ್ದಾರೆ. ತಾವೇ ಮುಂದೆ ನಿಂತು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಇನ್ನು ತಮ್ಮ ಅಫಿಷಿಯಲ್ ಬ್ಲಾಗ್ನಲ್ಲಿ ಶೀತಲ್ ಜೈನ್ ಅವರ ಬಗ್ಗೆ ಅಮಿತಾಬ್ ಬಹಳ ಭಾವಪೂರ್ಣವಾಗಿ ಬರೆದುಕೊಂಡಿದ್ದಾರೆ. 'ಸುಮಾರು 40 ವರ್ಷಗಳ ಕಾಲ ನನ್ನ ಕಷ್ಟಸುಖಗಳನ್ನು ನೋಡಿದ್ದ ವ್ಯಕ್ತಿ ಇನ್ನಿಲ್ಲ. ನನ್ನ ಕಷ್ಟಸುಖಗಳನ್ನು ಅವರು ಹಂಚಿಕೊಂಡಿದ್ದಾರೆ. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ನನಗೂ ನನ್ನ ಕುಟುಂಬಕ್ಕೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ನಾನು ಅಭಿನಯಿಸಬೇಕಾದ ಸಿನಿಮಾಗಳು, ಪಾಲ್ಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಮುಂದೆ ನಿಂತು ಬಹಳ ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದರು. ಯಾವುದಾದರೂ ಕಾರ್ಯಕ್ರಮದಲ್ಲಿ ನಮ್ಮ ಕುಟುಂಬದ ಸದಸ್ಯರು ಪಾಲ್ಗೊಳ್ಳಲಾಗಲಿಲ್ಲ ಎಂದರೆ ಶೀತಲ್ ಅವರೇ ನಮ್ಮ ಪರವಾಗಿ ಭಾಗವಹಿಸುತ್ತಿದ್ದರು. ಅವರು ಬಹಳ ಸರಳ ವ್ಯಕ್ತಿ. ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ' ಎಂದು ಶೀತಲ್ ಹಾಗೂ ತಮ್ಮ ನಡುವೆ ಇದ್ದ ಒಡನಾಟವನ್ನು ನೆನೆಸಿಕೊಂಡಿದ್ದಾರೆ.
1998ರಲ್ಲಿ ಅಮಿತಾಬ್ ಬಚ್ಚನ್, ಗೋವಿಂದ ನಟಿಸಿದ್ದ 'ಬಡೇ ಮಿಯಾ ಚೋಟೆ ಮಿಯಾ' ಸಿನಿಮಾವನ್ನು ಶೀತಲ್ ಜೈನ್ ಅವರೇ ನಿರ್ಮಿಸಿದ್ದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಶೀತಲ್ ಜೈನ್ ನಿಧನಕ್ಕೆ ಅನುಪಮ್ ಖೇರ್, ಮಧುರ್ ಭಂಡಾರ್ಕರ್ ಸೇರಿದಂತೆ ಇನ್ನಿತರ ಸೆಲಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.