ನವದೆಹಲಿ:ಚಂಡೀಗಢ ಮೂಲದ ರೂಪದರ್ಶಿ ಹರ್ನಾಝ್ ಕೌರ್ ಸಂಧು ಇಸ್ರೇಲ್‌ನಲ್ಲಿ ನಡೆದ 2021ರ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಮಿಸ್ ಯೂನಿವರ್ಸ್ ಪಟ್ಟ ಪಡೆದ 3ನೇ ಭಾರತೀಯ ಮಹಿಳೆ ಎನಿಸಿದ್ದಾರೆ. 1994ರಲ್ಲಿ ಸುಶ್ಮಿತಾ ಸೇನ್ ಹಾಗೂ 2000ರಲ್ಲಿ ಲಾರಾ ದತ್ತಾ ಭೂಪತಿ ಈ ಸಾಧನೆ ಮಾಡಿದ್ದರು.
2017ರಲ್ಲಿ ಮಿಸ್ ಚಂಡೀಗಢ, 2018ರಲ್ಲಿ ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್ ಇಂಡಿಯಾ, 2019ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪಂಜಾಬ್ ಕಿರೀಟವನ್ನು ಹರ್ನಾಜ್ ತಮ್ಮದಾಗಿಸಿಕೊಂಡಿದ್ದರು. ಜೊತೆಗೆ ಫೆಮಿನಾ ಮಿಸ್ ಇಂಡಿಯಾವನ್ನು ಪೂರೈಸಿದ್ದರು.
ಹರ್ನಾಜ್ ಹದಿಹರೆಯದಲ್ಲೇ ಮಾಡೆಲಿಂಗ್ ವೃತ್ತಿಜೀವನ ಪ್ರಾರಂಭಿಸಿ ಅನೇಕ ಮಾಡೆಲಿಂಗ್ ಮತ್ತು ಫ್ಯಾಷನ್ ಈವೆಂಟ್‌ಗಳಲ್ಲಿ ಭಾಗವಹಿಸಿದ್ದಾರೆ. ಕ್ರಮೇಣ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಮುಂದಾರು. ಪಂಜಾಬಿನ 'ಯಾರ ದಿಯಾನ್ ಪೂ ಬರನ್' ಹಾಗೂ 'ಬಾಯಿ ಜಿ ಕುಟ್ಟಂಗೆ' ಚಿತ್ರಗಳಲ್ಲಿಯೂ ಇವರು ಕೆಲಸ ಮಾಡಿದ್ದಾರೆ.
ಗರ್ಭ, ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ
ಆಕೆಯ ತಾಯಿ ಸ್ತ್ರೀರೋಗ ತಜ್ಞೆಯಾಗಿ ಜೀವನದಲ್ಲಿ ಯಶಸ್ಸು ಕಂಡವರು. ತನ್ನ ತಾಯಿಯಿಂದ ಸ್ಫೂರ್ತಿ ಪಡೆದ ಹರ್ನಾಜ್ ಮಹಿಳೆಯರ ಆರೋಗ್ಯ ಮತ್ತು ಮಹಿಳಾ ಸಬಲೀಕರಣದ ಸುಧಾರಣೆಗೆ ಶ್ರಮಿಸುತ್ತಿದ್ದು, ಹಲವು ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ಇದಲ್ಲದೇ, ಮಿಸ್ ದಿವಾ ಅವಧಿಯಲ್ಲಿ ಇಸ್ರೇಲ್ ರಾಯಭಾರ ಕಚೇರಿ, ರಾಜೀವ್ ಗಾಂಧಿ ಕ್ಯಾನ್ಸರ್ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಖುಷಿ ಎಂಬ ಎನ್‌ಜಿಒ ಸಂಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಆರೋಗ್ಯ ಶಿಬಿರ, ಗರ್ಭ ಸಮಸ್ಯೆ ಹಾಗೂ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಚಂಡೀಗಢದಿಂದಲೇ ತಮ್ಮ ಶಾಲಾ, ಕಾಲೇಜು ವಿದ್ಯಾಭ್ಯಾಸ ಮುಗಿಸಿರುವ ಈ ವಿಶ್ವ ಸುಂದರಿ ಪ್ರಸ್ತುತ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಮಾಡೆಲಿಂಗ್ ಜೊತೆಗೆ ಅಡುಗೆ, ನೃತ್ಯ ಮತ್ತು ಗಾಯನವನ್ನು ಇಷ್ಟಪಡುವ ಈ ಸುಂದರಿ ಫಿಟ್ ಆಗಿರಲು ಯೋಗವನ್ನು ಸಹ ಆನಂದಿಸುತ್ತಾರೆ.
ಇದನ್ನೂ ಓದಿ:21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ: ಅಭಿನಂದನೆ ಸಲ್ಲಿಸಿದ ಮಾಜಿ ವಿಶ್ವಸುಂದರಿಯರು