ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ ಬಾಲಿವುಡ್ನಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಅನೇಕ ಕಲಾವಿದರು ಬಾಲಿವುಡ್ನಲ್ಲಿ ತಮಗೆ ಉಂಟಾದ ಅನುಭವಗಳ ಬಗ್ಗೆ ಹೇಳಿಕೊಂಡಿದ್ದರು.
2017 ರಲ್ಲಿ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಕಂಗನಾ ರಣಾವತ್ ಕರಣ್ ಜೋಹರ್ ಅವರನ್ನು ಉದ್ಧೇಶಿಸಿ ಬಾಲಿವುಡ್ನಲ್ಲಿ ಸ್ವಜನ ಪಕ್ಷಪಾತದ ರೂವಾರಿ ನೀವು ಎಂದು ಹೇಳಿ ಎಲ್ಲರೂ ಆಶ್ಚರ್ಯಗೊಳ್ಳುವಂತೆ ಮಾಡಿದ್ದರು. ಇದೀಗ ಪ್ರಿಯಾಂಕ ಛೋಪ್ರಾ ಜೋನ್ಸ್ ಕೂಡಾ ಬಾಲಿವುಡ್ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದಾರೆ. ಪ್ರಿಯಾಂಕ ಛೋಪ್ರಾ ಕೂಡಾ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಬಾಲಿವುಡ್ಗೆ ಬಂದವರು. ನಾನು ಚಿತ್ರರಂಗಕ್ಕೆ ಬಂದಾಗ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ. ಸ್ಟಾರ್ ಮಕ್ಕಳಾಗಿ ಜನಿಸಿದವರಿಗೆ ಅವರದ್ದೇ ಆದ ಒತ್ತಡಗಳಿರುತ್ತವೆ. ಎಷ್ಟೋ ಬಾರಿ ತಂದೆ ತಾಯಿಗಳ ಹೆಸರು ಮಕ್ಕಳನ್ನು ಕಾಪಾಡುವುದಿಲ್ಲ.
ಕುಟುಂಬದ ಹೆಸರಿಗೂ ಅವರ ಸ್ಟಾರ್ಡಮ್ಗೂ ಬಹಳಷ್ಟು ವ್ಯತ್ಯಾಸವಿದೆ. ನನ್ನನ್ನೂ ಕೂಡಾ ಕೊನೆ ಗಳಿಗೆಯಲ್ಲಿ ಕೆಲವು ಸಿನಿಮಾಗಳಿಂದ ಹೊರಗೆ ಕಳಿಸಿ ಆ ಜಾಗಕ್ಕೆ ಬೇರೆಯವರನ್ನು ಶಿಫಾರಸು ಮಾಡಿದ ಉದಾಹರಣೆಗಳಿವೆ. ಈ ಘಟನೆಯಿಂದ ನಾನು ಸಾಕಷ್ಟು ನೊಂದಿದ್ದೇನೆ. ಇದರಿಂದ ದೊಡ್ಡ ಪಾಠವನ್ನೂ ಕಲಿತಿದ್ದೇನೆ. ಅಷ್ಟೇ ಅಲ್ಲ, ಈ ಅಡೆತಡೆಗಳ ನಡುವೆಯೂ ನಾನು ಯಶಸ್ಸನ್ನು ಕಂಡಿದ್ಧೇನೆ ಎಂದು ಪ್ರಿಯಾಂಕ ಛೋಪ್ರಾ ಹೇಳಿದ್ದಾರೆ.
ಬಾಲಿವುಡ್ನಲ್ಲಿ ಸ್ವಜನಪಕ್ಷಪಾತ ಇರಬಹುದು. ಆದರೆ ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ಇಲ್ಲಿ ಯಾವುದೇ ಹಿನ್ನೆಲೆ ಇಲ್ಲದೆ ಬಂದ ಎಷ್ಟೋ ಮಂದಿ ಸ್ಟಾರ್ಗಳಾಗಿ ಹೆಸರು ಮಾಡಿದ್ದಾರೆ. ನಾನೂ ಕೂಡಾ ಇಲ್ಲಿ ಬಂದಾಗ ನನಗೆ ಯಾರೂ ತಿಳಿದಿರಲಿಲ್ಲ. ಸಿನಿಮಾ ಪ್ರಪಂಚ ನನಗೆ ಹೊಸದು. ಆದರ ನಾನು ಹಿಂದೆ ಹೆಜ್ಜೆ ಇಡಲಿಲ್ಲ. ನಾನು ಪಾರ್ಟಿ ಹಾಗೂ ಇತರ ಸಮಾರಂಭಗಳಿಗೆ ಹೆಚ್ಚಾಗಿ ಭಾಗವಹಿಸುತ್ತಿರಲಿಲ್ಲವಾದ್ದರಿಂದ ಹೆಚ್ಚು ಜನರ ಸಂಪರ್ಕ ಸಾಧ್ಯವಾಗಲಿಲ್ಲ.
ಜನರು ನನ್ನನ್ನು ಗುರುತಿಸದಿದ್ದರೂ ನನ್ನ ನಟನೆಯನ್ನು ಗುರುತಿಸಿದರೆ ಸಾಕು ಎಂಬ ಮನೋಭಾವ ನನ್ನಲ್ಲಿ ಇತ್ತು. ನನಗೆ ಡ್ಯಾನ್ಸ್ ಕೂಡಾ ಬರುತ್ತಿರಲಿಲ್ಲ. ಅದನ್ನೂ ಕಲಿತೆ. ಹಲವಾರು ಅಡೆತಡೆಗಳನ್ನು ಎದುರಿಸಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ನಾನು ಯಶಸ್ವಿಯಾಗಿದ್ಧೇನೆ ಎಂದು ಪಿಗ್ಗಿ ತಮ್ಮ ಅನುಭವವನ್ನು ಹೇಳಿಕೊಂಡಿದ್ಧಾರೆ.