ಇತ್ತೀಚೆಗೆ ಬಯೋಪಿಕ್ ಹಾಗೂ ನೈಜ ಘಟನೆ ಆಧರಿಸಿದ ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತಿವೆ. ಇದೀಗ ಈ ಸಾಲಿಗೆ ಮತ್ತೊಂದು ನೈಜ ಘಟನೆ ಆಧಾರಿತ ಸಿನಿಮಾ ಸೇರಿಕೊಳ್ಳಲಿದೆ. ಪಾಕ್ ಉಗ್ರರ ಮೇಲಿನ ದಾಳಿ ಘಟನೆ ಇಟ್ಟುಕೊಂಡೇ ತೆರೆಗೆ ಬಂದ ಉರಿ ಸಿನಿಮಾ ದೇಶಾಭಿಮಾನದ ಜೊತೆಗೆ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿತ್ತು. ಇದೀಗ ಬಾಲಾಕೋಟ್ - ದಿ ಟ್ರೂ ಸ್ಟೋರಿ ಸಿನಿಮಾ ರೆಡಿಯಾಗಲಿದೆ.
ಅಭಿನಂದನ್ ಸಾಹಸ ತೆರೆ ಮೇಲೆ: ವಿಂಗ್ ಕಮಾಂಡರ್ ಆಗಲಿದ್ದಾರೆ ನಟ ವಿವೇಕ್
ಬಾಲಾಕೋಟ್ ವಾಯುದಾಳಿ ಕುರಿತು ಚಿತ್ರವೊಂದನ್ನು ತೆರೆಗೆ ತರಲು ಬಾಲಿವುಡ್ ಮುಂದಾಗಿದೆ. ನಟ ವಿವೇಕ್ ಒಬೆರಾಯ್ ಈ ಚಿತ್ರವನ್ನು ತೆರೆಗೆ ತರಲು ತಯಾರಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ನಲ್ಲಿ ಕಾಣಿಸಿಕೊಂಡಿದ್ದ ನಟ ವಿವೇಕ್ ಒಬೆರಾಯ್, ಈಗ ಬಾಲಕೋಟ್ ದಾಳಿಯ ಮೊದಲು ಮತ್ತು ನಂತರ ಘಟನೆಯನ್ನು ಪರದೆ ಮೇಲೆ ತೋರಿಸಲು ಕಸರತ್ತು ನಡೆಸಿದ್ದಾರಂತೆ. ಪುಲ್ವಾಮಾ ಘಟನೆ ಬಳಿಕ ಪಾಕ್ನ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಏರ್ಸ್ಟ್ರೈಕ್ ಬಗ್ಗೆ ಬಾಲಾಕೋಟ್ - ದಿ ಟ್ರೂ ಸ್ಟೋರಿ ಸಿನಿಮಾ ಮಾಡಲು ಅವರು ಮುಂದಾಗಿದ್ದಾರೆ. ಭಾರತೀಯ ವಾಯುಪಡೆಯ ಕಥೆ, ಶೌರ್ಯದ ಜೊತೆಗೆ ಮೂರು ದಿನಗಳ ಕಾಲ ಪಾಕ್ನ ವಶದಲ್ಲಿದ್ದ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಧೈರ್ಯವನ್ನು ದೇಶದ ಅಭಿಮಾನಿಗಳಿಗೆ ತಿಳಿಸಿಸಲು ತಯಾರಿ ನಡೆಸಿದ್ದಾರೆ.
ಈ ಚಿತ್ರವನ್ನು ಏಕಕಾಲದಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲು ವಿವೇಕ್ ಒಬೆರಾಯ್ ಯೋಚಿಸಿದ್ದಾರೆ. ಕೇವಲ ಸಿನಿಮಾ ತೆರೆಗೆ ತರುವುದು ನಮ್ಮ ಉದ್ದೇಶವಲ್ಲ, ನಿಜವಾಗಿಯೂ ಏನಾಯಿತು ಎಂಬುದರ ಬಗ್ಗೆ ದೇಶದ ಜನರಿಗೆ ತಿಳಿಸುವುದು ನಮ್ಮ ಆದ್ಯತೆ. ಜೊತೆಗೆ ಘಟನೆ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವುದು ನಮ್ಮ ಉದ್ದೇಶ ಎಂದು ಚಿತ್ರ ತಂಡ ತಿಳಿಸಿದೆ. ಚಿತ್ರದ ಚಿತ್ರೀಕರಣ ಜಮ್ಮು, ಕಾಶ್ಮೀರ, ದೆಹಲಿ ಮತ್ತು ಆಗ್ರಾದಲ್ಲಿ ನಡೆಯಲಿದೆಯಂತೆ.