ಕಳೆದ ವರ್ಷದ ಆರಂಭದಲ್ಲಿ ಬಾಲಿವುಡ್ ನಟ ವರುಣ್ ಧವನ್ ಅರೆ ಬೆತ್ತಲಾಗಿ ನಿಂತಿರುವ ಪೋಸ್ಟರ್ ಒಂದು ವೈರಲ್ ಆಗಿತ್ತು. ವರುಣ್ ಧವನ್ ಹೀಗೇಕೆ ನಿಂತಿದ್ದಾರೆ ಎಂದು ಕೆಲವರು ವರುಣ್ ಧವನ್ನನ್ನು ಬೈಯ್ದದ್ದೂ ಉಂಟು. ಆದರೆ ಇದು ವರುಣ್ ಅಭಿನಯದ ಹೊಸ ಸಿನಿಮಾ 'ಮಿ.ಲೆಲೆ' ಪೋಸ್ಟರ್ ಎಂಬ ವಿಚಾರ ಹೊರಬಿತ್ತು. ಅಭಿಮಾನಿಗಳು ಈ ಕಾಮಿಡಿ ಚಿತ್ರವನ್ನು ನೋಡಲು ಕಾತರದಿಂದ ಕಾಯುತ್ತಿರುವ ವೇಳೆ ಚಿತ್ರತಂಡ ವರುಣ್ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ.
'ಮಿ.ಲೆಲೆ' ಚಿತ್ರದಲ್ಲಿ ವರುಣ್ ಧವನ್ ಬದಲಿಗೆ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. 2014 ರಲ್ಲಿ ಬಿಡುಗಡೆಯಾದ 'ಹಮ್ಟಿ ಶರ್ಮ ಕಿ ದುಲ್ಹನಿಯಾ', 2017 ರಲ್ಲಿ 'ಬದ್ರಿನಾಥ್ ಕಿ ದುಲ್ಹನಿಯಾ' ಚಿತ್ರದ ನಂತರ ವರುಣ್ ಧವನ್, ನಿರ್ಮಾಪಕ ಕರಣ್ ಜೋಹರ್ ಹಾಗೂ ನಿರ್ದೇಶಕ ಶಶಾಂಕ್ ಕೈತಾನ್ ಮೂವರ ಕಾಂಬಿನೇಷನ್ನಲ್ಲಿ 'ಮಿ. ಲೆಲೆ' ಚಿತ್ರ ಮಾಡಲು ಎಲ್ಲಾ ಓಕೆ ಆಗಿತ್ತು. 2020 ಆರಂಭದಲ್ಲಿ ಚಿತ್ರತಂಡ ಪೋಸ್ಟರ್ ಕೂಡಾ ಬಿಡುಗಡೆ ಮಾಡಿತ್ತು. ಆದರೆ ಚಿತ್ರೀಕರಣ ಆರಂಭವಾಗಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಆರಂಭವಾಯ್ತು. ಆದರೆ ಇದೀಗ ನಿರ್ದೇಶಕ ಶಶಾಂಕ್ ಸ್ಕ್ರಿಪ್ಟ್ನಲ್ಲಿ ಮತ್ತೆ ಬದಲಾವಣೆ ಮಾಡಿದ್ದು ಚಿತ್ರದಲ್ಲಿ ವರುಣ್ ಧವನ್ ಬದಲಿಗೆ ವಿಕ್ಕಿ ಕೌಶಲ್ ನಟಿಸುತ್ತಿದ್ದಾರೆ. ವಿಕ್ಕಿ ಕೌಶಲ್ ಕೂಡಾ ಚಿತ್ರದ ಕಥೆ ಕೇಳಿ ನಟಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.