ಹೈದರಾಬಾದ್:ಬಾಲಿವುಡ್ ನಟ ವರುಣ್ ಧವನ್ ತಮ್ಮ ಧೀರ್ಘಕಾಲದ ಗೆಳತಿ ನತಾಶಾ ಅವರ ಕೈ ಹಿಡಿದಿದ್ದಾರೆ. ಜನವರಿ 24 ರಂದು ಸಂಜೆ ಮುಂಬೈ ಅಲಿಭಾಗ್ನ 'ದಿ ಮಾನ್ಶನ್' ಐಷಾರಾಮಿ ಹೋಟೆಲ್ನಲ್ಲಿ ಕುಟುಂಬ ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ವರುಣ್ ಧವನ್ ನತಾಶಾ ಅವರನ್ನು ವರಿಸಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೆಚ್ಚಿನ ನಟನಿಗೆ ಅಭಿಮಾನಿಗಳು ಹಾರೈಸಿದ್ದಾರೆ.
ಮದುವೆ ಫೋಟೋಗಳೊಂದಿಗೆ ತಮ್ಮ ಅರಿಶಿನ ಶಾಸ್ತ್ರದ ಫೋಟೋವನ್ನು ವರುಣ್ ಧವನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಕಣ್ಣಿಗೆ ಟಿಂಟೆಡ್ ಗ್ಲಾಸ್ ಹಾಕಿಕೊಂಡು, ಮೈಗೆಲ್ಲಾ ಅರಿಶಿನ ಹಚ್ಚಿಸಿಕೊಂಡಿರುವ ವರುಣ್ ತಮ್ಮ ಮಸಲ್ಗಳನ್ನು ತೋರುವಂತೆ ಪೋಸ್ ನೀಡಿದ್ದಾರೆ. ಮತ್ತೊಂದು ಫೋಟೋದಲ್ಲಿ ವರುಣ್, ತಮ್ಮ ಸ್ನೇಹಿತರೊಂದಿಗೆ ಟೀಮ್ ರಘು, ಟೀಮ್ ಸೀನು, ಟೀಮ್ ವೀರ್ ಎಂದು ಹಳದಿ ಅಕ್ಷರದಲ್ಲಿ ಬರೆದಿರುವ ಬಿಳಿ ಟೀ ಷರ್ಟ್ ಹಿಡಿದುಕೊಂಡು ಪೋಸ್ ನೀಡಿದ್ದಾರೆ. ಇದೆಲ್ಲಾ ವರುಣ್ ಸಿನಿಮಾದಲ್ಲಿ ನಟಿಸಿರುವ ಪಾತ್ರದ ಹೆಸರುಗಳು.