ನವದೆಹಲಿ: ಬಾಲಿವುಡ್ ನಟ ವರುಣ್ ಧವನ್ ಅವರು ತಮ್ಮ ದೀರ್ಘಕಾಲದ ಗೆಳತಿ ಹಾಗೂ ಫ್ಯಾಶನ್ ಡಿಸೈನರ್ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೂರು ದಿನಗಳ ನಂತರ ತಮ್ಮ ಮದುವೆಗೆ ಶುಭ ಕೋರಿದ ಎಲ್ಲಾ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಟ್ವೀಟ್ ಮೂಲಕ ಧನ್ಯವಾದ ತಿಳಿಸಿರುವ ನಟ ವರುಣ್ ಧವನ್, ಕಳೆದ ಕೆಲವು ದಿನಗಳಿಂದ ನಾನು ಮತ್ತು ನತಾಶಾ ನಿಮ್ಮೆಲ್ಲರಿಂದ ಸಾಕಷ್ಟು ಪ್ರೀತಿ ಮತ್ತು ವಿಶ್ವಾಸ ಪಡೆದುಕೊಂಡಿದ್ದೇವೆ. ನಿಮ್ಮ ಪ್ರೀತಿ-ವಿಶ್ವಾಸ ಹೀಗೆ ಇರಲಿ. ಎಲ್ಲರಿಗೂ ಧನ್ಯವಾದಗಳು ಎಂದು ನಟ ವರುಣ್ ಧವನ್ ತಿಳಿಸಿದ್ದಾರೆ.
ಅಲಿಬಾಗ್‌ನ ಐಷಾರಾಮಿ 'ದಿ ಮಾನ್ಶನ್' ಹೋಟೆಲ್‌ನಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಹಿಂದೂ ಸಂಪ್ರದಾಯದಂತೆ ವರುಣ್, ನತಾಶಾ ದಲಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು 40-50 ಆಮಂತ್ರಿತ ಗಣ್ಯರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಇನ್ನು ಫೆಬ್ರವರಿಯಲ್ಲಿ ಬಾಲಿವುಡ್ ಗಣ್ಯರಿಗಾಗಿ ವರುಣ್ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ನವವಿವಾಹಿತರಿಗೆ ಕರಣ್ ಜೋಹರ್, ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ, ಶಾಹಿದ್ ಕಪೂರ್, ಅನುಷ್ಕಾ ಶರ್ಮಾ ಸೇರಿದಂತೆ ಹಲವಾರು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ತಿಳಿಸಿದ್ದರು.