ಮುಂಬೈ :ಆರಂಭದಲ್ಲಿ ಕಳವಳ ವ್ಯಕ್ತಪಡಿಸಿದ ನೀವು, ಇದೀಗ ಆತ್ಮಹತ್ಯೆ ಎಂದು ವರದಿ ನೀಡುವ ಮೂಲಕ ಯಾಕೆ ಉಲ್ಟಾ ಹೊಡೆದಿರಿ? ಎಂದು ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್ ಕೃತಿ ಅವರು ಏಮ್ಸ್ ಫೋರೆನ್ಸಿಕ್ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ಅವರಿಂದ ವಿವರಣೆ ಕೋರಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ವಿಚಾರದಲ್ಲಿ ಏಮ್ಸ್ ಫೋರೆನ್ಸಿಕ್ ಮುಖ್ಯಸ್ಥರ ನಿಲುವನ್ನು ಪ್ರಶ್ನಿಸುವ ಸುದ್ದಿ ವಾಹಿಯ ವರದಿಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶ್ವೇತಾ, ಯಾಕೆ ಈ ರೀತಿ ಉಲ್ಟಾ ಹೊಡೆದಿರಿ ಉತ್ತರ ನೀಡಿ ಎಂದು ಕೇಳಿದ್ದಾರೆ.
ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ವರದಿಯ ಕುರಿತು ಮತ್ತು ಮುಂಬೈ ಪೊಲೀಸರು ಸುಶಾಂತ್ ಸಾವು ಸಂಭವಿಸಿದ ಸ್ಥಳವನ್ನು ಸರಿಯಾಗಿ ಪರಿಶೀಲಿಸಿದ ಬಗ್ಗೆ ಸುಧೀರ್ ಗುಪ್ತಾ ಕಳವಳ ವ್ಯಕ್ತಪಡಿಸಿದ ಆಡಿಯೋ ಒಂದನ್ನು ಸುದ್ದಿವಾಹಿನಿ ಬಿಡುಗಡೆ ಮಾಡಿದೆ.
ಸುಶಾಂತ್ ಸಿಂಗ್ ಸಾವಿನ ಕುರಿತು ಮೆಡಿಕೋ ಲೀಗಲ್ ಒಪೀನಿಯನ್ ನೀಡಲು ಸಹಕರಿಸುವಂತೆ ಸಿಬಿಐಗೆ ಕಳೆದ ಆಗಸ್ಟ್ನಲ್ಲಿ ಸುಧೀರ್ ಗುಪ್ತಾ ನೇತೃತ್ವದ ಫೋರೆನ್ಸಿಕ್ ತಂಡ ಮನವಿ ಮಾಡಿತ್ತು.
ಇತ್ತೀಚಿಗೆ ಏಮ್ಸ್ ಫೋರೆನ್ಸಿಕ್ ವಿಭಾಗ ನೀಡಿದ ವರದಿಯಲ್ಲಿ ಸುಶಾಂತ್ ಸಿಂಗ್ ಸಾವು ಕೊಲೆ ಅಲ್ಲ, ಆತ್ಮಹತ್ಯೆ ಎಂದು ತಿಳಿಸಿತ್ತು. ಕತ್ತು ಹಿಸುಕಲಾಗಿದೆ, ವಿಷ ಪ್ರಾಶಣ ಮಾಡಲಾಗಿದೆ ಎಂಬ ಸುಶಾಂತ್ ಕುಟುಂಬಸ್ಥರ ವಾದವನ್ನು ತಿರಸ್ಕರಿಸಿತ್ತು.