ಮುಂಬೈ: ಕಳೆದ ಭಾನುವಾರ ಆತ್ಮಹತ್ಯೆಗೆ ಶರಣಾಗಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮೂರು ದಿನಗಳ ಮುಂಚಿತವಾಗಿ ಸಿಬ್ಬಂದಿಗೆ ಸಂಬಳ ನೀಡಿದ್ದ ವಿಚಾರ ಇದೀಗ ಬಹಿರಂಗಗೊಂಡಿದೆ.
ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಮಾನಸಿಕ ಖಿನ್ನತೆಯಿಂದ ಅವರು ಬಳಲುತ್ತಿದ್ದರು ಎಂಬ ಮಾತು ಕೇಳಿ ಬಂದಿದೆ.
ಮುಂಬೈ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮೂರು ದಿನ ಮೊದಲೇ ಸಿಬ್ಬಂದಿಗೆ ಸ್ಯಾಲರಿ ನೀಡಿದ್ದ ಅವರು, ಮುಂದಿನ ದಿನಗಳಲ್ಲಿ ನಿಮಗೆ ಸಂಬಳ ನೀಡಲು ನನ್ನಿಂದ ಆಗುವುದಿಲ್ಲ ಎಂದಿದ್ದರು ಎಂಬ ಸತ್ಯ ಇದೀಗ ಹೊರಬಿದ್ದಿದೆ.
ಆತ್ಮಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಮುಂಬೈ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕುತ್ತಿದ್ದು ಈ ವೇಳೆ ಸಿಬ್ಬಂದಿ ವಿಚಾರಣೆ ನಡೆಸಿದಾಗ ಈ ಅಂಶ ಹೊರಬಿದ್ದಿದೆ. ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್, ಕರಣ್ ಜೋಹರ್ ಸೇರಿದಂತೆ ಅನೇಕರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.