ಮುಂಬೈ: ನಟ ಸುಶಾಂತ್ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಮುಂಬೈ ಪೊಲೀಸರು, ಸಲ್ಮಾನ್ ಖಾನ್ ಸೇರಿ ಹಲವರಿಗೆ ಮ್ಯಾನೇಜರ್ ಆಗಿದ್ದ ರೇಷ್ಮಾಶೆಟ್ಟಿ ಅವರನ್ನು ಸತತ 5 ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಸುಶಾಂತ್ ಸಾವಿನ ತನಿಖೆಗೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಕರೆಸಿಕೊಂಡ 35 ಜನರಲ್ಲಿ ರೇಷ್ಮಾಶೆಟ್ಟಿ ಕೂಡ ಸೇರಿದ್ದಾರೆ. ಸಲ್ಮಾನ್ಖಾನ್, ಅಕ್ಷಯ್ ಕುಮಾರ್ ಮತ್ತು ಆಲಿಯಾ ಭಟ್ ಸೇರಿದಂತೆ ಬಾಲಿವುಡ್ನ ಎ-ಲಿಸ್ಟ್ ಕಲಾವಿದರೊಂದಿಗೆ ರೇಷ್ಮಾ ಕೆಲಸ ಮಾಡಿದ್ದಾರೆ.
ಜುಲೈ 6ರಂದು ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ಕೂಡ ನಗರದ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ಅವರೊಂದಿಗೆ ವಕೀಲರು ಇದ್ದರು.
ಗೋಲಿಯೋನ್ ಕಿ ರಾಸ್ಲೀಲಾ, ರಾಮ್-ಲೀಲಾ (2013), ಬಾಜಿರಾವ್ ಮಸ್ತಾನಿ (2015) ಮತ್ತು ಪದ್ಮಾವತ್ (2018) ಚಿತ್ರಗಳಿಗೆ ಸಂಬಂಧಿಸಿದಂತೆ ಸುಶಾಂತ್ಸಿಂಗ್ ಅವರನ್ನು ಸಂಪರ್ಕಿಸಿದ್ದೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾರೆ. ಹಾಗೆಯೇ, ಕಳೆದ ವಾರಗಳಲ್ಲಿ ಸುಶಾಂತ್ ಅವರ ಕುಟುಂಬ, ಸಿಬ್ಬಂದಿ, ಕೆಲವು ಸ್ನೇಹಿತರು ಮತ್ತು ಗೆಳತಿ ರಿಯಾ ಚಕ್ರವರ್ತಿ ಅವರ ಹೇಳಿಕೆಗಳನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.