ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲಿಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಸುಶಾಂತ್ ತಂದೆ, ರಿಯಾ ಚಕ್ರವರ್ತಿ ಹಾಗೂ ಕುಟುಂಬದ ಮೇಲೆ ದೂರು ನೀಡಿದ್ದು ರಿಯಾ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.
ಮೊನ್ನೆಯಷ್ಟೇ ಸುಶಾಂತ್ ಸಹೋದರಿ ಮೀತು ಸಿಂಗ್, ರಿಯಾ ಚಕ್ರವರ್ತಿ ಸುಶಾಂತ್ಗೆ ಬಹಳ ಕಿರುಕುಳ ನೀಡುತ್ತಿದ್ದಳು ಎಂದು ಹೇಳಿಕೆ ನೀಡಿದ್ದರು. ಈ ನಡುವೆ ಸುಶಾಂತ್ ಮತ್ತೊಬ್ಬ ಸಹೋದರಿ ಶ್ವೇತಾ ಸಿಂಗ್ , ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. 'ಮರಣೋತ್ತರ ಪರೀಕ್ಷೆಯಲ್ಲಿ ಸೂಚಿಸಿರುವಂತೆ ಇದು ಆತ್ಮಹತ್ಯೆಯಾ ಅಥವಾ ಇದರಲ್ಲಿ ಬೇರೆ ಯಾರ ಕೈವಾಡ ಇರಬಹುದಾ..?' ಎಂದು ಪ್ರಶ್ನಾರ್ಥಕವಾಗಿ ಬರೆದುಕೊಂಡಿದ್ದಾರೆ.
'ಸುಶಾಂತ್ ತನ್ನ ಜೀವನದಲ್ಲಿ ಎಲ್ಲವನ್ನೂ ಪ್ಲ್ಯಾನ್ ಮಾಡಿ ಅದರಂತೆ ನಡೆಯುತ್ತಿದ್ದರು. ಇಂತ ದಿನ ಇಂತಹ ಕೆಲಸಗಳನ್ನು ಮಾಡಬೇಕು ಎಂದು ತಮ್ಮ ಡೈರಿಯಲ್ಲಿ ಬರೆದಿಡುತ್ತಿದ್ದರು. ಅದರಂತೆ ಅವರು ತಪ್ಪದೆ ನಡೆಯುತ್ತಿದ್ದರು. ಅದೇ ರೀತಿ ಜೂನ್ 29 ವರೆಗೂ ಯಾವ ಕೆಲಸಗಳನ್ನು ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದರು. ಆದರೆ ಜೂನ್ 14 ರಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಇದನ್ನು ನಂಬಲು ಹೇಗೆ ಸಾಧ್ಯ..?' ಎಂದು ಶ್ವೇತಾ ಪ್ರಶ್ನಿಸಿದ್ದಾರೆ.
ಬಿಳಿ ಬಣ್ಣದ ಚಿಕ್ಕ ಬೋರ್ಡ್ನಲ್ಲಿ ಮಾರ್ಕರ್ನಿಂದ ಸುಶಾಂತ್ ಬರೆದಿರುವ ದಿನಚರಿಗಳನ್ನು ಶ್ವೇತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಜೂನ್ 29 ರಿಂದ ಮೆಡಿಟೇಷನ್ ಆರಂಭಿಸಬೇಕು ಎಂದು ಬರೆಯಲಾಗಿದೆ. ಅಷ್ಟೇ ಅಲ್ಲ, ಎದ್ದ ಕೂಡಲೇ ಹಾಸಿಗೆಯನ್ನು ಸರಿ ಮಾಡುವುದು, ಪುಸ್ತಕಗಳನ್ನು ಓದುವುದು, ಕಂಟೆಂಟ್ ಒರಿಯಂಟೆಡ್ ಸಿನಿಮಾ/ವೆಬ್ ಸೀರೀಸ್ಗಳನ್ನು ನೋಡುವುದು, ಗಿಟಾರ್ ಕಲಿಯುವುದು, ವರ್ಕೌಟ್ ಮಾಡುವುದು ಸೇರಿದಂತೆ ಕೆಲವೊಂದು ದಿನಚರಿಗಳನ್ನು ಇಲ್ಲಿ ಬರೆಯಲಾಗಿದೆ.