ನವದೆಹಲಿ: ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪ ಹೊತ್ತಿರುವ ಉದ್ಯಮಿ ರಾಜ್ ಕುಂದ್ರಾ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಇಂದು ನೋಟಿಸ್ ಜಾರಿ ಮಾಡಿದೆ.
ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ ಕುಂದ್ರಾ ಅವರನ್ನು ಬಂಧಿಸದಂತೆ ಸುಪ್ರೀಂಕೋರ್ಟ್ ಆದೇಶ ಮಾಡಿದೆ. ಅಲ್ಲದೇ ಅವರಿಗೆ ನಾಲ್ಕು ವಾರಗಳ ರಕ್ಷಣೆ ನೀಡಿದೆ. ಈ ಕುರಿತು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಸಹ ಜಾರಿ ಮಾಡಿದೆ.
ಮುಂಬೈ ಪೊಲೀಸರು ಕುಂದ್ರಾ ಅವರ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ, ಬಾಂಬೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರಾಕರಿಸಿದ ನಂತರ ಕುಂದ್ರಾ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ಪೀಠವು ಇಂದು ವಾದಗಳನ್ನು ಆಲಿಸಿದ ನಂತರ ಕುಂದ್ರಾಗೆ ಬಂಧನದಿಂದ ರಕ್ಷಣೆ ನೀಡಿದೆ. ನಾಲ್ಕು ವಾರಗಳ ನಂತರ ಹೆಚ್ಚಿನ ವಿಚಾರಣೆಗೆ ದಿನ ನಿಗದಿಪಡಿಸಿತು. ವಕೀಲರಾದ ಶಕ್ತಿ ಪಾಂಡೆ ಮತ್ತು ಪ್ರಶಾಂತ್ ಪಾಟೀಲ್ ಅವರು ರಾಜ್ ಕುಂದ್ರಾ ಪರ ವಾದಿಸಿದರು. ಸುಪ್ರೀಂಕೋರ್ಟ್ನ ಈ ಆದೇಶದಿಂದ ರಾಜ್ ಕುಂದ್ರಾಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಇದನ್ನೂ ಓದಿ:Viral Video: ತಮ್ಮನಿಗೆ ತಿಂಡಿ ತಿನ್ನಿಸಲು ಮುಂದಾದ ಐರಾ ಯಶ್: ಆಮೇಲೇನಾಯ್ತು?
ಕುಂದ್ರಾ ಅವರು ಅಶ್ಲೀಲ ಚಿತ್ರ ಪ್ರಕರಣದಲ್ಲಿ ಸಂಪರ್ಕ ಹೊಂದಿಲ್ಲ ಎಂದು ಹೇಳಿದ್ದಾರೆ. ಆ್ಯಪ್ ಮೂಲಕ ಪೋರ್ನ್ ಚಿತ್ರಗಳನ್ನು ವಿತರಿಸಿದ ಆರೋಪದ ಮೇಲೆ ಈ ವರ್ಷದ ಜುಲೈನಲ್ಲಿ ಮುಂಬೈ ಪೊಲೀಸರು ಕುಂದ್ರಾ ಅವರನ್ನು ಬಂಧಿಸಿದ್ದರು. ಸೆಪ್ಟೆಂಬರ್‌ನಲ್ಲಿ ಕುಂದ್ರಾ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.