ಆರ್. ರಾಧಾಕೃಷ್ಣನ್ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಹಿಂದಿ ಸಿನಿಮಾ 'ಪಟ್ಟಾ'ದಲ್ಲಿ ನಟಿಸಲು ಮಾಜಿ ಕ್ರಿಕೆಟಿಗ ಶ್ರೀಶಾಂತ್ ಸಜ್ಜಾಗಿದ್ದು, ಇದೀಗ ನಟಿ ಸನ್ನಿ ಲಿಯೋನ್ ಚಿತ್ರ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಕ್ರಿಕೆಟ್ ಜೀವನದಲ್ಲಿ ಸವಾಲುಗಳು ಎದುರಾದ ಬಳಿಕ ಶ್ರೀಶಾಂತ್ ಕಂಪ್ಲೀಟ್ ಆಗಿ ಕ್ರಿಕೆಟ್ ಜಗತ್ತಿಗೆ ಗುಡ್ ಬಾಯ್ ಹೇಳಿದ್ದು, ಈಗ ಫುಲ್ ಟೈಂ ನಟನಾಗಿ ಗುರುತಿಸಿಕೊಂಡಿದ್ದಾರೆ.
ಓದಿ : 2022ರಲ್ಲಿ ತೆರೆಗೆ ಬರಲಿದೆ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್' ಭಾಗ-1
'ಪಟ್ಟಾ' ಸಿನಿಮಾದಲ್ಲಿ ಸಿಬಿಐ ಅಧಿಕಾರಿಯ ಪಾತ್ರವನ್ನು ಶ್ರೀಶಾಂತ್ ಮಾಡಲಿದ್ದಾರೆ. ಸಿಬಿಐ ಅಧಿಕಾರಿ ಮಹಿಳೆಯೊಬ್ಬರನ್ನು ಕೇಂದ್ರೀಕರಿಸಿ ತನಿಖೆ ಕೈಗೊಳ್ಳುವುದು ಚಿತ್ರದ ಕಥೆ. ಸಿನಿಮಾದಲ್ಲಿ ಮಹಿಳೆಯ ಪಾತ್ರಕ್ಕೆ ಒಬ್ಬ ಉತ್ತಮ ನಟಿಯನ್ನು ಕರೆ ತರಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ಅದರಂತೆ ಸನ್ನಿ ಲಿಯೋನ್ ನಮ್ಮ ತಂಡ ಸೇರಿಕೊಳ್ಳಲಿದ್ದಾರೆ ಎಂದು ನಿದೇರ್ಶಕ ಆರ್. ರಾಧಾಕೃಷ್ಣ ತಿಳಿಸಿದ್ದಾರೆ.
ಸನ್ನಿ ಲಿಯೋನ್ ಈ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆ ಎಂದು ನಾವು ಭಾವಿಸಿರಲಿಲ್ಲ. ಆದರೆ, ಪಾತ್ರದ ಬಗ್ಗೆ ಹೇಳಿದಾಗ ಅವರು ತಕ್ಷಣ ಒಪ್ಪಿಕೊಂಡರು. ಒಬ್ಬ ಧೈರ್ಯವಂತ ಮಹಿಳೆಯ ಪಾತ್ರಕ್ಕೆ ಸನ್ನಿ ಜೀವ ತುಂಬಲಿದ್ದಾರೆ ಎಂದು ರಾಧಾಕೃಷ್ಣ ಹೇಳಿದ್ದಾರೆ. 'ಪಟ್ಟಾ' ತನಿಖಾ ರಾಜಕೀಯದ ಕಥೆ ಹೇಳುವ ಥ್ರಿಲ್ಲರ್ ಸಿನಿಮಾ ಎಂದು ಚಿತ್ರ ತಂಡ ಹೇಳಿದೆ.