ಮುಂಬೈ: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಬಗ್ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆಸಕ್ತಿ ತೋರಿಸಿದ್ದಾರೆ. ಮುಂಬೈ ಪೊಲೀಸರು ಬಹು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರೆ, ಸ್ವಾಮಿ ಪ್ರಧಾನಿ ನರೇಂದ್ರ ಮೋದಿಯ ಅವರಿಗೆ ಪತ್ರ ಬರೆದಿದ್ದು, ನಟನ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪರಿಶೀಲನೆಗಾಗಿ ನೇಮಕಗೊಂಡ ವಕೀಲರಾದ ಇಷ್ಕರನ್ ಸಿಂಗ್ ಭಂಡಾರಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪತ್ರದ ಫೋಟೋ ಹಂಚಿಕೊಂಡಿದ್ದಾರೆ.
ಸ್ವಾಮಿ ಬರೆದ ಪತ್ರದಲ್ಲಿ, "ನಟ ಸುಶಾಂತ್ ಸಿಂಗ್ ರಜಪೂತ್ ಅಕಾಲಿಕ ಮರಣದ ಬಗ್ಗೆ ನಿಮಗೆಲ್ಲ ಚೆನ್ನಾಗಿ ಗೊತ್ತು. ನನ್ನ ಸಹವರ್ತಿ ಇಷ್ಕರನ್ ಸಿಂಗ್ ಭಂಡಾರಿ ನಟನ ಆತ್ಮಹತ್ಯೆ ಪ್ರಕರಣ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಎಫ್‌ಐಆರ್ ದಾಖಲಿಸಿದ ಬಳಿಕ ಪೊಲೀಸರು ಪ್ರಕರಣದ ತನಿಖೆ ನಡೆಸುತಿದ್ದಾರೆ. ಬಾಲಿವುಡ್ ಜಗತ್ತಿನಲ್ಲಿ ದುಬೈ ಡಾನ್ಗಳ ಜೊತೆ ಸಂಪರ್ಕ ಹೊಂದಿರುವ ಅನೇಕ ದೊಡ್ಡ ಹೆಸರುಗಳನ್ನು ಪೊಲೀಸರು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ಬಗ್ಗೆ ಮುಂಬೈನ ನನ್ನ ಮೂಲಗಳಿಂದ ತಿಳಿದುಕೊಂಡಿದ್ದೇನೆ. ನಟನ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ, ಸುಶಾಂತ್ ಸಿಂಗ್ ಸಾವಿನ ಕುರಿತು ಬಾಲಿವುಡ್ ಖಾನ್ಗಳ ಮೌನವನ್ನು ಅವರು ಪ್ರಶ್ನಿಸಿದ್ದು, 'ಖಾನ್ ಮಸ್ಕಿಟೀರ್ಸ್' ಎಂದು ಉಲ್ಲೇಖಿಸಿ ಮೂವರು ಸೂಪರ್ ಸ್ಟಾರ್ಗಳ ಆಸ್ತಿಗಳ ಬಗ್ಗೆ ಏಜೆನ್ಸಿ ತನಿಖೆಗೆ ಒತ್ತಾಯಿಸಿದ್ದಾರೆ.
ಪತ್ರದಲ್ಲಿ ನೇರವಾಗಿ ಯಾರ ಹೆಸರನ್ನು ಉಲ್ಲೇಖಿಸದಿದ್ದರೂ, ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ರನ್ನು ಗುರಿಯಾಗಿಸಿ 'ಖಾನ್ ಮಸ್ಕಿಟೀರ್ಸ್' ಎಂದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.