ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಅವರನ್ನು ಇಂದು ಮತ್ತೆ ಸಿಬಿಐ ಪ್ರಶ್ನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದಕ್ಕೂ ಮುನ್ನ ಸುಶಾಂತ್ ಗೆಳೆಯ ಸಿದ್ದಾರ್ಥ್ , ಸುಶಾಂತ್ ಕುಕ್ ನೀರಜ್ ಸಿಂಗ್, ಸಹಾಯಕ ದೀಪೇಶ್ ಸಾವಂತ್ ಅವರನ್ನು ಸಿಬಿಐ ತಂಡ ಡಿಆರ್ಡಿಒ ಗೆಸ್ಟ್ ಹೌಸ್ನಲ್ಲಿ ವಿಚಾರಣೆ ನಡೆಸಿತ್ತು. ನಂತರ ಅಲ್ಲಿಂದ ಈ ಮೂವರೊಂದಿಗೆ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಫ್ಲಾಟ್ಗೆ ತೆರಳಿತ್ತು. ಡಿಆರ್ಡಿಒ ಅತಿಥಿ ಗೃಹದಲ್ಲಿ, ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ತಂಡ ತಂಗಿದ್ದು ಈ ಮೂವರನ್ನೂ ಪ್ರತ್ಯೇಕವಾಗಿ ಕರೆಸಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.
ಜೂನ್ 14 ರಂದು ಸುಶಾಂತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಾಗ ಈ ಮೂವರೂ ಕೂಡಾ ಫ್ಲಾಟ್ನಲ್ಲಿದ್ದ ಕಾರಣ ಸುಮಾರು 5 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ವಿಚಾರಣೆ ನಂತರ ಸುಶಾಂತ್ ಫ್ಲಾಟ್ಗೆ ಸಿಬಿಐ ತಂಡದೊಂದಿಗೆ ಫೊರೆನ್ಸಿಕ್ ಸೈನ್ಸ್ ಎಕ್ಸ್ಪರ್ಟ್ಗಳು ಹಾಗೂ ಮುಂಬೈ ಪೊಲೀಸ್ ಅಧಿಕಾರಿಗಳು ಕೂಡಾ ತೆರಳಿದ್ದರು.
ಸುಶಾಂತ್ ಫ್ಲಾಟ್ನಲ್ಲಿ ಸುಮಾರು 3 ಗಂಟೆಗಳ ಕಾಲ ಇದ್ದ ಸಿಬಿಐ ತಂಡ ಮತ್ತೆ ಸಿದ್ದಾರ್ಥ್ ಪಿಥಾನಿ, ನೀರಜ್ ಸಿಂಗ್ ಹಾಗೂ ದೀಪೇಶ್ ಸಾವಂತ್ ಅವರನ್ನು ಗೆಸ್ಟ್ ಹೌಸ್ಗೆ ಕರೆದೊಯ್ದು ಸಂಜೆ ಮತ್ತೆ ವಿಚಾರಣೆ ನಡೆಸಿದೆ. ಶನಿವಾರ ಕೂಡಾ ಸಿಬಿಐ ತಂಡ ಈ ಮೂವರೊಂದಿಗೆ ಸುಶಾಂತ್ ಫ್ಲಾಟ್ಗೆ ಭೇಟಿ ನೀಡಿತ್ತು ಎನ್ನಲಾಗಿದೆ.
ಸಿಬಿಐ ಮತ್ತೊಂದು ತಂಡ ಸುಶಾಂತ್ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾದ ಕೂಪರ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಮೂರನೇ ತಂಡ ಬಾಂದ್ರಾ ಪೊಲೀಸ್ ಠಾಣೆಗೆ ತೆರಳಿ ಸುಶಾಂತ್ ಕೇಸ್ ವಿಚಾರಣೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದೆ.
ಸುಶಾಂತ್ ತಂದೆ ಬಿಹಾರದ ಪಾಟ್ನಾದಲ್ಲಿ ರಿಯಾ ಚಕ್ರವರ್ತಿ ಹಾಗೂ ಇತರರ ಮೇಲೆ ದಾಖಲಿಸಲಾದ ಎಫ್ಐಆರ್ ವಿಚಾರಣೆಯನ್ನು ಸಿಬಿಐಗೆ ವರ್ಗಾಯಿಸಿದ್ದನ್ನು ಕಳೆದ ಬುಧವಾರ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಸುಶಾಂತ್ ಸಾವಿನ ನಂತರ ಮುಂಬೈ ಪೊಲೀಸರು ಇದು ಆತ್ಮಹತ್ಯೆ ಎಂದು ಕೇಸ್ ದಾಖಲಿಸಿದ್ದರು. ಆದರೆ ಸುಶಾಂತ್ ಕುಟುಂಬ ರಿಯಾ ಹಾಗೂ ಆಕೆ ಕುಟುಂಬದ ಮೇಲೆ ದೂರು ದಾಖಲಿಸಿ ಸುಶಾಂತ್ ಆತ್ಮಹತ್ಯೆಗೆ ರಿಯಾ ಚಕ್ರವರ್ತಿ ಪ್ರಚೋದನೆ ಮಾಡಿರುವುದಲ್ಲದೆ, ಪುತ್ರನನ್ನು ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಆರೋಪಿಸಿದ್ದರು.