ಮೋಹಕ ತಾರೆ ಶ್ರೀದೇವಿ ಹೆಸರು ಕೇಳಿದೊಡನೆ ಆ ಸುಂದರಿ ಇನ್ನೂ ನಮ್ಮೊಡನೆ ಇರಬಾರದಿತ್ತಾ ಎನಿಸುವುದು ಗ್ಯಾರಂಟಿ. ಕಳೆದ ವರ್ಷ ಫೆಬ್ರವರಿ 24ರಂದು ಶ್ರೀದೇವಿ ನಮ್ಮನ್ನೆಲ್ಲಾ ಅಗಲಿದ ಆ ದಿನವನ್ನು ಕರಾಳ ದಿನ ಎಂದೇ ಹೇಳಬಹುದು.
ಸಿಂಗಾಪುರ್ನ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಕುಟುಂಬದೊಂದಿಗೆ ಪ್ರತ್ಯಕ್ಷವಾದ ಶ್ರೀದೇವಿ!
ಸಿಂಗಾಪುರ್ನ ಮೇಡಂ ಟುಸ್ಸಾಡ್ಸ್ನಲ್ಲಿ ಇಂದು ಶ್ರೀದೇವಿ ಅವರ ಮೇಣದ ಪ್ರತಿಮೆ ಲೋಕಾರ್ಪಣೆಗೊಂಡಿದೆ. ಬೋನಿ ಕಪೂರ್ ಹಾಗೂ ಪುತ್ರಿಯರು ಮೇಣದ ಪ್ರತಿಮೆಯನ್ನು ಇಂದು ಉದ್ಘಾಟಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ಕೂಡಾ ಸಂತೋಷ ವ್ಯಕ್ತಪಡಿಸಿದ್ದಾರೆ.
ಶ್ರೀದೇವಿ ನೆನಪಿನಲ್ಲಿ ಸಾಗುತ್ತಿರುವ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್. ಸಿಂಗಾಪುರ್ ಮೇಡಂ ಟುಸ್ಸಾಡ್ಸ್ ಸಂಸ್ಥೆ ಶ್ರೀದೇವಿ ಮೇಣದ ಪ್ರತಿಮೆಯನ್ನು ಸ್ಥಾಪಿಸಿದೆ. ಶ್ರೀದೇವಿ ಪತಿ ಬೋನಿ ಕಪೂರ್, ಪುತ್ರಿಯರಾದ ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಸಿಂಗಾಪುರ್ನಲ್ಲಿ ಈ ಮೇಣದ ಪ್ರತಿಮೆಯನ್ನು ಇಂದು ಲೋಕಾರ್ಪಣೆ ಮಾಡಿದ್ದಾರೆ. 1987ರಲ್ಲಿ ಬಿಡುಗಡೆಯಾದ ಶೇಖರ್ ಕಪೂರ್ ನಿರ್ದೇಶನದ ಮಿ. ಇಂಡಿಯಾ ಸಿನಿಮಾದ 'ಹವಾ ಹವಾಯಿ' ಹಾಡಿನಲ್ಲಿ ಶ್ರೀದೇವಿ ಧರಿಸಿದ್ದ ಗೋಲ್ಡನ್ ಕಾಸ್ಟ್ಯೂಮ್ ಲುಕ್ನಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಪ್ರತಿಮೆ ನೋಡಿದರೆ ಸ್ವತಃ ಶ್ರೀದೇವಿಯೇ ನಮ್ಮ ಮುಂದೆ ನಿಂತಂತೆ ಭಾಸವಾಗುತ್ತದೆ. ಇದೊಂದು ಮೇಣದ ಪ್ರತಿಮೆ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ.
ಇನ್ನು ಆಗಸ್ಟ್ 13 ಶ್ರೀದೇವಿ ಹುಟ್ಟುಹಬ್ಬದಂದೇ ಮೇಡಂ ಟುಸ್ಸಾಡ್ಸ್ ಸಿಂಗಾಪುರ್ ಸಂಸ್ಥೆ ಮೇಣದ ಪ್ರತಿಮೆಯನ್ನು ಸ್ಥಾಪಿಸುತ್ತಿರುವುದಾಗಿ ಹೇಳಿತ್ತು. ಬೋನಿ ಕಪೂರ್ ಹಾಗೂ ಪುತ್ರಿಯರು ಶ್ರೀದೇವಿ ಪ್ರತಿಮೆ ನೋಡಿ ಭಾವುಕರಾಗಿದ್ದಾರೆ. ಜಾನ್ವಿ ಕಪೂರ್ ಪ್ರೀತಿಯ ಅಮ್ಮನನ್ನೇ ದೃಷ್ಟಿಸುತ್ತಿದ್ದು ಕಂಡು ಬಂತು. ಇನ್ನು ಮೇಣದ ಪ್ರತಿಮೆ ಮಾಡುತ್ತಿರುವ ಚಿಕ್ಕ ವಿಡಿಯೋ ತುಣುಕೊಂದನ್ನು ಬೋನಿ ಕಪೂರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೇಡಂ ಟುಸ್ಸಾಡ್ಸ್ ಸಂಸ್ಥೆಗೆ ಬೋನಿ ಕಪೂರ್ ಕುಟುಂಬ ಧನ್ಯವಾದ ಸಲ್ಲಿಸಿದೆ.