ಮುಂಬೈ:ವಲಸೆ ಕಾರ್ಮಿಕರನ್ನು ತಮ್ಮ ತವರು ರಾಜ್ಯಗಳಿಗೆ ಕಳುಹಿಸಿಕೊಡುವ ಕೆಲಸದ ಹಿಂದೆ ಯಾವುದೇ ರಾಜಕೀಯ ಇಲ್ಲ. ಈ ಕೆಲಸವನ್ನು ನಾನು ಶುದ್ಧ ಮನಸ್ಸಿನಿಂದ ಮಾಡುತ್ತಿದ್ದೇನೆ ಎಂದು ಬಾಲಿವುಡ್ ನಟ ಸೋನು ಸೂದ್ ಹೇಳಿದ್ದಾರೆ.
ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ತೆರಳಲು ಸಹಾಯ ಮಾಡುತ್ತಿರುವ ಈ ನಟನ ವಿರುದ್ಧ ಪರ ಮತ್ತು ವಿರೋಧದ ಟೀಕೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಹಿಂದೊಮ್ಮೆ ಸ್ಪಷ್ಟನೆ ನೀಡಿರುವ ಅವರು ಮತ್ತೆ ಟೀಕಾಕಾರರಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಉಳಿದುಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದುದನ್ನು ಕಂಡ ಸೂದ್, ಅವರನ್ನು ವಿಶೇಷ ಬಸ್‌ಗಳ ಮೂಲಕ ತವರಿಗೆ ಕಳುಹಿಸಿದ್ದರು. ಇದೊಂದು ರಾಜಕೀಯ ಉದ್ದೇಶ, ಇದರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಶಿವಸೇನೆ ಮತ್ತು ಕಾಂಗ್ರೆಸ್ ಮುಖಂಡರು ಟೀಕೆಗಳನ್ನು ಮಾಡಿದ್ದರು.
ನನ್ನ ಮೇಲೆ ಆರೋಪ ಕೇಳಿ ಬಂದಾಗ ಅದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ದಿನ ಪತ್ರಿಕೆ ಅಥವಾ ಟಿವಿಯಲ್ಲಿ ಏನೆಲ್ಲಾ ಪ್ರಸಾರಗೊಂಡಿದೆ ಎಂಬುದನ್ನು ನಾನು ನೋಡಿಲ್ಲ. ಇದರ ಬಗ್ಗೆ ಅನೇಕರು ಫೋನ್ ಮಾಡಿ ನನ್ನ ಪ್ರತಿಕ್ರಿಯೆ ಪಡೆದುಕೊಳ್ಳಲು ಮುಂದಾಗಿ ದ್ರು. ಆದರೆ ಈ ವೇಳೆ ನಾನು ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡುವ ಕೆಲಸದಲ್ಲಿ ಬ್ಯುಸಿ ಆಗಿದ್ದೆ. ಇಂತಹ ವಿಷಯಗಳಿಗೆ ಪ್ರತಿಕ್ರಿಯೆ ನೀಡಲು ನನ್ನ ಬಳಿ ಸಮಯವಿಲ್ಲ ಎಂದಿದ್ದೆ ಎಂದು ಅವರು ತಿಳಿಸಿದ್ದಾರೆ.
ನಾವು ಕೆಲವೊಮ್ಮೆ ಒಳ್ಳೆಯ ಕೆಲಸ ಮಾಡುತ್ತಿದ್ದಾಗ ಇಂತಹ ಆರೋಪ ನಮ್ಮ ಮೇಲೆ ಬರುವುದು ಸಾಮಾನ್ಯ. ಇಂಥ ವಿಚಾರಗಳಿಗೆ ನಾನು ತಲೆಕೆಡಿಸಿಕೊಂಡಿಲ್ಲ. ಆರೋಪಗಳು ಮತ್ತಷ್ಟು ಕೆಲಸ ಮಾಡಲು ನನಗೆ ಪ್ರೇರಣೆ ನೀಡಿವೆ ಎಂದು ಅವರು ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸೋನು ಸೂದ್ ಅವರನ್ನು ಟೀಕಿಸಿದ್ದ ಶೀವಸೇನೆ ಸಂಸದ ಸಂಜಯ್ ರಾವತ್, ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಹಾಗೂ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ದೇಶಾದ್ಯಂತ ಪ್ರಚಾರ ಮಾಡುವ ಉದ್ದೇಶದಿಂದ ಬಿಜೆಪಿ ಪಕ್ಷ ಸೋನ್ ಸೂದ್ ಅವರನ್ನು ಮುಂದೆ ಬಿಟ್ಟಿರುವ ಸಾಧ್ಯತೆಯಿದೆ. ಬೆಜೆಪಿಯ ಸೂಚನೆ ಮೇರೆಗೆ ಅವರು ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಬಿಜೆಪಿಯವರು ಹಣ ಕೊಟ್ಟು ನಡೆಸುತ್ತಿರುವ ಕುತಂತ್ರ ಎಂದು ಆರೋಪಿಸಿದ್ದರು.
ಇದಾದ ಬಳಿಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭೇಟಿ ಮಾಡಿದ್ದ ಸೋನು ಸೂದ್, ಸಂಜಯ್ ರಾವತ್ ಟೀಕೆಗೆ ಪ್ರತಿಕ್ರಿಯಿಸಿ, ದೇಶದ ಪ್ರತಿ ಮೂಲೆಗಳಲ್ಲೂ ತಮ್ಮ ಕೆಲಸಕ್ಕೆ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದು ಒಂದು ಪಕ್ಷ ಅಥವಾ ಒಬ್ಬರಿಗೆ ಮಾತ್ರ ಸಂಬಂಧಪಟ್ಟ ವಿಷಯವಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಮಸ್ಯೆಯಲ್ಲಿರುವವರಿಗೆ ನಾವು ಸಹಾಯ ಮಾಡಬೇಕು, ಇಲ್ಲಿ ವ್ಯಕ್ತಿ, ಪಕ್ಷ ಮುಖ್ಯವಾಗುವುದಿಲ್ಲ ಎಂದಿದ್ದರು.