ಸೋನು ಸೂದ್, ಅಸಹಾಯಕರ ಪಾಲಿನ ಆಪತ್ಪಾಂಧವ. ಕೊರೊನಾ ಲಾಕ್ಡೌನ್ ಸಮಯದಲ್ಲಿ ಸೋನು ಸೂದ್ ವಲಸೆ ಕಾರ್ಮಿಕರಿಗೆ ಮಾಡಿದ ಸಹಾಯ ಎಂದಿಗೂ ಮರೆಯಲಾರದಂತದ್ದು. ನಂತರ ಕೂಡಾ ಅನೇಕರಿಗೆ ಸೋನು ಸೂದ್ ಸಹಾಯ ಮಾಡಿದ್ದಾರೆ. ಹೆಣ್ಣು ಮಕ್ಕಳ ಮದುವೆಗೆ ಸಹಾಯ ಮಾಡಿದ್ದಾರೆ. ರೈತರಿಗೆ ಹೊಲ ಟ್ರ್ಯಾಕ್ಟರ್ ಎತ್ತು ಕೊಡಿಸಿದ್ದಾರೆ. ಅವರು ಮಾಡಿರುವ ಸಹಾಯ ಒಂದಲ್ಲಾ ಎರಡಲ್ಲ.
ಅಭಿಮಾನಿಯ ಪ್ರೀತಿ ಕಂಡು ಭಾವುಕರಾದ ನಟ ಸೋನು ಸೂದ್ - Sonu sood helped to Poors
ಅಭಿಮಾನಿಯೊಬ್ಬರು ತಮ್ಮನ್ನು ನೋಡಲು ಬಿಹಾರದಿಂದ ಮುಂಬೈಗೆ ಸೈಕಲ್ನಲ್ಲಿ ಬರುತ್ತಿದ್ದಾರೆ ಎಂದು ತಿಳಿದ ಸೋನು ಸೂದ್ ಅವರನ್ನು ವಿಮಾನದಲ್ಲಿ ಕರೆ ತರುವ ವ್ಯವಸ್ಥೆ ಮಾಡಿದ್ದಾರೆ. ನಾನು ಮಾಡಿದ ಸಹಾಯಕ್ಕಿಂತ ಜನರು ನೀಡುತ್ತಿರುವ ಪ್ರೀತಿ ಬಹಳ ದೊಡ್ಡದು ಎಂದು ಹೇಳಿಕೊಂಡು ಅಭಿಮಾನಿಯ ಪ್ರೀತಿಗೆ ಸೋನು ಸೂದ್ ಭಾವುಕರಾಗಿದ್ದಾರೆ.
![ಅಭಿಮಾನಿಯ ಪ್ರೀತಿ ಕಂಡು ಭಾವುಕರಾದ ನಟ ಸೋನು ಸೂದ್ Sonu sood Fan](https://etvbharatimages.akamaized.net/etvbharat/prod-images/768-512-9671917-thumbnail-3x2-sonu.jpg)
ಸೋನು ಸೂದ್ ಮಾಡಿದ ಈ ಕಾರ್ಯಕ್ಕೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಈಗ ಅವರ ಅಭಿಮಾನಿಗಳ ಸಂಖ್ಯೆ ಕೂಡಾ ಹೆಚ್ಚಾಗಿದೆ. ಸೋನು ಸೂದ್ ಅವರನ್ನು ಖುದ್ದು ಭೇಟಿ ಮಾಡಲು ಇತ್ತೀಚೆಗೆ ಬಿಹಾರಕ್ಕೆ ಸೇರಿದ ಅರ್ಮಾನ್ ಎಂಬ ಅಭಿಮಾನಿಯೊಬ್ಬರು ಮುಂಬೈಗೆ ಸೈಕಲ್ನಲ್ಲಿ ಬರಲು ಆರಂಭಿಸಿದ್ದರು. ಆದರೆ ದಾರಿ ಮಧ್ಯೆ ಮಾಧ್ಯಮದವರು ಈ ವ್ಯಕ್ತಿಯನ್ನು ಭೇಟಿ ಮಾಡಿ ಮಾತನಾಡಿಸಿದ್ದಾರೆ. 'ಸೋನು ಸೂದ್ ಕಷ್ಟದ ಸಮಯದಲ್ಲಿ ಎಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ನಾನೂ ಕೂಡಾ ಬಿಹಾರಕ್ಕೆ ಸೇರಿಕೊಳ್ಳಲು ಸಹಾಯ ಮಾಡಿದ್ದಾರೆ. ಆದ್ದರಿಂದ ಅವರನ್ನು ನಾನು ಭೇಟಿ ಆಗಿ ಕೃತಜ್ಞತೆ ಸಲ್ಲಿಸಲು ಹೊರಟಿದ್ದೇನೆ' ಎಂದು ಅರ್ಮಾನ್ ಹೇಳಿದ್ದಾರೆ. ಹೀಗೊಬ್ಬ ಅಭಿಮಾನಿ ನನ್ನನ್ನು ನೋಡಲು ಸೈಕಲ್ನಲ್ಲಿ ಬರುತ್ತಿದ್ದಾರೆ ಎಂದು ತಿಳಿದ ಸೋನುಸೂದ್ , 'ನನ್ನನ್ನು ನೋಡಲು ಇಷ್ಟು ದೂರ ಬರುವುದು ಬೇಡ. ನಾನೇ ಅವರನ್ನು ವಿಮಾನದಲ್ಲಿ ವಾರಣಾಸಿಯಿಂದ ಮುಂಬೈವರೆಗೆ ಕರೆತರುತ್ತೇನೆ. ಅಷ್ಟೇ ಅಲ್ಲ, ಸೈಕಲ್ನೊಂದಿಗೆ ಮತ್ತೆ ಅವರ ಸ್ಥಳಕ್ಕೆ ವಾಪಸ್ ಹೋಗಲು ಕೂಡಾ ವ್ಯವಸ್ಥೆ ಮಾಡುತ್ತೇನೆ' ಎಂದಿದ್ದಾರೆ.
ಅಭಿಮಾನಿಯ ಈ ಪ್ರೀತಿಗೆ ಪ್ರತಿಕ್ರಿಯಿಸಿರುವ ಸೋನು ಸೂದ್, 'ನಾನು ಜನರಿಗೆ ಸಹಾಯ ಮಾಡಿದ್ದಕ್ಕಿಂತ ಅವರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿ ಬಹಳ ದೊಡ್ಡದು. ನಾನು ನೀಡಿದ್ದಕ್ಕಿಂತ ಹೆಚ್ಚಿನ ಪ್ರೀತಿಯನ್ನು ಜನರಿಂದ ಪಡೆಯುತ್ತಿದ್ದೇನೆ. ಇಂತ ಪ್ರೀತಿಯನ್ನು ಪಡೆಯುವ ಪುಣ್ಯ ಎಷ್ಟು ಜನರಿಗೆ ದೊರೆಯುತ್ತದೆ' ಎಂದು ಹೇಳಿಕೊಂಡು ಭಾವುಕರಾಗಿದ್ದಾರೆ. ಸದ್ಯಕ್ಕೆ ಸೋನುಸೂದ್ ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ 'ಆಚಾರ್ಯ' ಚಿತ್ರದಲ್ಲಿ ನಟಿಸುತ್ತಿದ್ದಾರೆ.