ಹೈದರಾಬಾದ್: ಬಾಲಿವುಡ್ ನಟ ಸೈಫ್ ಅಲಿ ಖಾನ್ ಸಹೋದರಿ ಹಾಗೂ ನಟಿ ಸೋಹಾ ಆಲಿ ಖಾನ್ ನಿನ್ನೆ ತಾವು ಆಚರಿಸಿದ ರಕ್ಷಾ ಬಂಧನದ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಂಭ್ರಮದ ಬಳಿಕ ಮುತ್ತು ನೀಡುತ್ತಿರುವ ಮಕ್ಕಳ ಅಂದದ ಫೋಟೋ ಭಾರಿ ವೈರಲ್ ಆಗುತ್ತಿದೆ.
ದಂಪತಿ ಸೈಫ್ ಮತ್ತು ಕರೀನಾ ಅವರ ಕಿರಿಯ ಮಗ ಜೆಹ್ ಅಲಿ ಖಾನ್ಗೆ ಇದು ಮೊದಲ ಹಬ್ಬವಾಗಿದ್ದರಿಂದ ಮಗಳೊಂದಿಗೆ ಸಹೋದರ ಸೈಫ್ ಮನೆಗೆ ತೆರಳಿದ ಸೋಹಾ ಅಲಿ ಖಾನ್ ರಾಖಿ ಕಟ್ಟಿ ಹಬ್ಬವನ್ನು ಆಚರಿಸಿದ್ದಾರೆ. ಸೋಹಾ ಅಲಿ ಖಾನ್ ಮಗಳಾದ ಇನಾಯಾ ನೌಮಿ ಕೆಮ್ಮು (Inaaya Naumi Kemmu) ಸಹೋದರ ಜೆಹ್ ಅಲಿ ಖಾನ್ಗೆ ರಾಖಿ ಕಟ್ಟಿದ್ದಾಳೆ.
ಬಳಿಕ ಒಬ್ಬರಿಗೊಬ್ಬರು ಸಿಹಿ ಮುತ್ತು ನೀಡಿ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು, ಈ ಅಂದದ ಫೋಟೋವನ್ನು ನಟಿ ಸೋಹಾ ಇಂದು (ಮಂಗಳವಾರ) ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇನಾಯಾ ತನ್ನ ಸಹೋದರನಿಗೆ ರಾಖಿ ಕಟ್ಟುತ್ತಿರುವುದನ್ನು ನೀವು ನೋಡುತ್ತಿರಬಹುದು. ಇಬ್ಬರು ಮಕ್ಕಳು ತಮ್ಮ ಪೋಷಕರ ಮಡಿಲಲ್ಲಿ ಕುಳಿತಿರುವುದನ್ನು ಸಹ ತಾವು ಕಾಣಬಹುದು. ಈ ಬಂಧನ ಹೀಗೆ ಇರಲಿ ಎಂದು ಆಕರ್ಷಕ ಕ್ಯಾಪ್ಶನ್ ಕೂಡ ಬರೆದುಕೊಂಡಿದ್ದಾರೆ.
ಮಕ್ಕಳ ಫೋಟೋವನ್ನು ನೋಡಿದ ನೆಟಿಜನ್ಗಳು ಹಾಗೂ ಸೆಲೆಬ್ರಿಟಿಗಳು ಹೃದಯದ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ಮಾಲ್ಡೀವ್ಸ್ಗೆ ತೆರಳಿದ್ದ ಕರೀನಾ ಮತ್ತು ಸೈಫ್ ದಂಪತಿ ರಕ್ಷಾ ಬಂಧನ ನಿಮಿತ್ತ ಆಗಸ್ಟ್ 22 ರಂದು ಹಿಂದಿರುಗಿದ್ದರು.