ಸನ್ನಿ ಪವಾರ್, 2016 ರಲ್ಲಿ 'ಲಯನ್' ಎಂಬ ಆಸ್ಟ್ರೇಲಿಯನ್ ಇಂಡಿಪೆಂಡೆಂಟ್ ಸಿನಿಮಾ ಬಿಡುಗಡೆಯಾದಾಗ ಎಲ್ಲೆಡೆ ಕೇಳಿಬಂದ ಹೆಸರು. 6 ವರ್ಷದ ಈ ಬಾಲಕ ಲಯನ್ ಸಿನಿಮಾದಲ್ಲಿ, ನಾಯಕನ ಚಿಕ್ಕ ವಯಸ್ಸಿನ ಪಾತ್ರದಲ್ಲಿ ನಟಿಸಿದ್ದ. ರಾತ್ರೋರಾತ್ರಿ ಸನ್ನಿ ಹಾಲಿವುಡ್ ಸೆಲಿಬ್ರಿಟಿ ಆಗಿಹೋದ.
'ಲಯನ್' ಸಿನಿಮಾ ಆಸ್ಕರ್ ಪ್ರಶಸ್ತಿಗೆ ಕೂಡಾ ನಾಮಿನೇಟ್ ಆಗಿತ್ತು. 'ಕೋಲ್ಕತ್ತಾದ ಬಾಲಕನೋರ್ವ ಆಕಸ್ಮಿಕವಾಗಿ ತನ್ನ ಕುಟುಂಬದಿಂದ ದೂರವಾಗುತ್ತಾನೆ. ಆಸ್ಟ್ರೇಲಿಯಾದ ಕುಟುಂಬವೊಂದು ಅವನನ್ನು ದತ್ತು ತೆಗೆದುಕೊಂಡು ಸಾಕುತ್ತದೆ. ಆತ ದೊಡ್ಡವನಾದ ಮೇಲೆ ತಾನು ಹುಟ್ಟಿದ ಸ್ಥಳ ಹಾಗೂ ಹೆತ್ತವರನ್ನು ಹುಡುಕಲು ಹೊರಡುತ್ತಾನೆ. ಅದಕ್ಕಾಗಿ ಅವನು ಏನು ಕಷ್ಟ ಪಡುತ್ತಾನೆ' ಎಂಬುದು ಚಿತ್ರದ ಕಥೆ. ಸಾರೋ ಬ್ರೆಟ್ಲಿ ಎಂಬುವರ ಜೀವನದಲ್ಲಿ ನಡೆದ ಘಟನೆ ಬಗ್ಗೆ ಅವರೇ ಬರೆದ 'A Long Way Home' ಎಂಬ ಪುಸ್ತಕವನ್ನು ಆಧರಿಸಿ ಈ ಸಿನಿಮಾವನ್ನು ಗರ್ತ್ ಡೇವಿಸ್ ನಿರ್ದೇಶಿಸಿದ್ದರು.
ಸಿನಿಮಾಗಾಗಿ 6 ವರ್ಷದ ಬಾಲಕನನ್ನು ಹುಡುಕುವಾಗ ಚಿತ್ರತಂಡಕ್ಕೆ ಸಿಕ್ಕ ಪುಟಾಣಿಯೇ ಸನ್ನಿ ಪವಾರ್. ಶಾಲೆಯಲ್ಲಿ ಆಡಿಶನ್ ನಡೆಸಿದ್ದ ಚಿತ್ರತಂಡ ಸುಮಾರು 2000 ವಿದ್ಯಾರ್ಥಿಗಳಲ್ಲಿ ಕೊನೆಗೆ ಆಯ್ಕೆ ಮಾಡಿದ್ದು ಸನ್ನಿಯನ್ನು. ಸನ್ನಿ ಮುಂಬೈನ ಕಲಿನಾ ಬಳಿಯ ಕುಂಚಿ ಕುರ್ವೆ ನಗರ್ ಎಂಬ ಸ್ಲಮ್ ಏರಿಯಾದಲ್ಲಿ ವಾಸವಿರುವ ದಿಲೀಪ್ ಪವಾರ್ ಹಾಗೂ ವಸು ದಿಲೀಪ್ ಪವಾರ್ ದಂಪತಿಯ ಪುತ್ರ. ಈತನ ತಂದೆ ಸರ್ಕಾರಿ ಕಚೇರಿಯೊಂದರಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈತ 'ಲಯನ್' ಸಿನಿಮಾದಲ್ಲಿ ನಟಿಸಲು ಆಯ್ಕೆಯಾದಾಗ ವಯಸ್ಸು ಕೇವಲ 6 ವರ್ಷ. ಸಿನಿಮಾದಲ್ಲಿ ಈತನ ಆ್ಯಕ್ಟಿಂಗ್ ನೋಡಿ ಆಸ್ಕರ್ ವೇದಿಕೆಯಲ್ಲಿ 'ಅಕಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಪಿಕ್ಚರ್ ' ಪಡೆಯುವಾಗ ಬಹುತೇಕ ಹಾಲಿವುಡ್ ಸೆಲಬ್ರಿಟಿಗಳು ಈತನನ್ನು ಹೊಗಳಿದ್ದುಂಟು.
ವಿಶೇಷ ಎಂದರೆ ಸನ್ನಿ 'ಚಿಪ್ಪ' ಎಂಬ ಮತ್ತೊಂದು ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾಗಾಗಿ 19ನೇ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್-2019 ನಲ್ಲಿ ಉತ್ತಮ ಬಾಲನಟ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ. ಸಫ್ದರ್ ರೆಹಮಾನ್ ನಿರ್ದೇಶನದ ಈ ಹಿಂದಿ ಸಿನಿಮಾವನ್ನು ಟ್ರಾವೆಲಿಂಗ್ ಲೈಟ್, ವಿಕ್ಟೋರಿಯಾ ಮೀಡಿಯಾ, ಅಲ್ಟ್ರಾ ಮೀಡಿಯಾ ಆ್ಯಂಡ್ ಎಂಟರ್ಟೈನ್ಮೆಂಟ್ ಸಂಸ್ಥೆ ಜೊತೆಯಾಗಿ ನಿರ್ಮಿಸಿವೆ. 'ತಂದೆ-ತಾಯಿ ನೆನಪೇ ಇಲ್ಲದೆ ಯಾರದೋ ಮನೆಯಲ್ಲಿ ವಾಸವಿರುವ ಬಾಲಕನೋರ್ವನಿಗೆ ತಂದೆಯಿಂದ ಪತ್ರವೊಂದು ಬರುತ್ತದೆ. ಆದರೆ ಆ ಪತ್ರ ಉರ್ದು ಭಾಷೆಯಲ್ಲಿರುತ್ತದೆ. ತನ್ನ ತಂದೆ ಬಗ್ಗೆ, ಆ ಪತ್ರದಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಬಾಲಕ ಉರ್ದು ತಿಳಿದವರನ್ನು ಕೋಲ್ಕತ್ತಾದ ಚಳಿಗಾಲದ ರಾತ್ರಿಯಲ್ಲಿ ಹುಡುಕುತ್ತಾ ಹೋಗುತ್ತಾನೆ' ಈ ವೇಳೆ ನಡೆಯುವ ಘಟನೆಗಳೇ ಚಿತ್ರದ ಕಥಾಹಂದರ.
ಬಿಡುಗಡೆಗೂ ಮುನ್ನವೇ ಸಿನಿಮಾ ಎಲ್ಲರ ಕೇಂದ್ರಬಿಂದುವಾಗಿದೆ. ಇನ್ನು ಯಾವುದೇ ಆ್ಯಕ್ಟಿಂಗ್ ಕ್ಲಾಸ್ಗೆ ಹೋಗದೆ, ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಪ್ರಶಸ್ತಿಗಳನ್ನು ಪಡೆಯುತ್ತಿರುವ ಸನ್ನಿ ಪವಾರ್ ದೇಶದ ಹೆಮ್ಮೆಯ ಪುತ್ರ ಎನಿಸಿದ್ದಾನೆ. 6 ವರ್ಷದಲ್ಲೇ ತನ್ನ ಸಿನಿಮಾ ಕರಿಯರ್ ಆರಂಭಿಸಿದ್ದ ಸನ್ನಿಗೆ ಈಗ 11 ವರ್ಷ. ಅಂದಹಾಗೆ 'ಚಿಪ್ಪ' ಸಿನಿಮಾ ಇದೇ ವರ್ಷ ಸೆಪ್ಟಂಬರ್ನಲ್ಲಿ ಬಿಡುಗಡೆಯಾಗಲಿದೆ.