ಕ್ರೀಡಾ ಕ್ಷೇತ್ರದಲ್ಲಿ ಮರೆಯಲಾಗದ ಸಾಧನೆ ಮಾಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಂದ ಹಿಡಿದು ಎಂ.ಎಸ್.ಧೋನಿ, ಕಪಿಲ್ ದೇವ್ ಅವರ ಬಯೋಪಿಕ್‌ಗಳು ಈಗಾಗಲೇ ಬಿಡುಗಡೆಯಾಗಿವೆ. ಬಯೋಪಿಕ್ಗಳ ಬೆನ್ನು ಬಿದ್ದಿರುವ ಬಣ್ಣದ ಲೋಕ ಈಗ ಮತ್ತೊಬ್ಬರ ಜೀವನ ಚರಿತ್ರೆಯನ್ನು ಪರದೆ ಮೇಲೆ ತರಲು ಅಣಿಯಾಗುತ್ತಿದೆ.
ಹೌದು, ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ ಪ್ರವೀಣ್ ತಾಂಬೆ ಅವರ ಜೀವನಾಧಾರಿತ ಚಿತ್ರ ತಯಾರಾಗುತ್ತಿದ್ದು ಮೇಲಿನ ಕ್ರೀಡಾಪಟುಗಳ ಬಯೋಪಿಕ್ ಪಟ್ಟಿಗೆ ಈ ಸಿನಿಮಾ ಕೂಡ ಸೇರಿಕೊಂಡಂತಾಗಿದೆ. 'ಕೌನ್ ಪ್ರವೀಣ್ ತಾಂಬೆ?' ಎಂದು ಹೆಸರಿಡಲಾಗಿದ್ದು ಚಿತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲಪಾಡೆ ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ಚಿತ್ರದ ಮೊದಲ ಪೋಸ್ಟರ್ ಅನ್ನು ಇಂದು ಅನಾವರಣಗೊಳಿಸಲಾಯಿತು. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಪ್ರವೀಣ್ ಅವರ ಪಾತ್ರವನ್ನು ನಿರ್ವಹಿಸುತ್ತಿರುವುದು ನನ್ನ ಅದೃಷ್ಟ ಎಂದು ನಟ ಶ್ರೇಯಸ್ ತಲಪಾಡೆ ನಿರ್ದೇಶಕ ಜಯಪ್ರದ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
'ಕೌನ್ ಪ್ರವೀಣ್ ತಾಂಬೆ?' ಸಿನಿಮಾ ಬಗ್ಗೆ ಮಾತನಾಡಿದ ಪ್ರವೀಣ್ ತಾಂಬೆ, ನನ್ನ ಜೀವನ ಕಥೆ ಅನೇಕರಿಗೆ ಸ್ಪೂರ್ತಿಯಾಗಿರುವುದು ಖುಷಿ ತಂದಿದೆ. ಈ ಸಿನಿಮಾ ನೋಡಿದ ನಂತರ ಮತ್ತಷ್ಟು ಜನ ಈ ಪಟ್ಟಿಗೆ ಸೇರುತ್ತಾರೆ ಎಂಬ ಆಸೆ ಇದೆ. ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ನನಸಾಗಿಸಲು ನಿರಂತರವಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇನ್ನು ಈಗಾಗಲೇ ಚಿತ್ರೀಕರಣ ಮುಗಿಸಿರುವ 'ಕೌನ್ ಪ್ರವೀಣ್ ತಾಂಬೆ?' ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರವು ಜನಪ್ರಿಯ OTT ಡಿಸ್ನಿ + ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿ ಏಪ್ರಿಲ್ 1 ರಿಂದ ಸ್ಟ್ರೀಮಿಂಗ್ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಸಹ ನೀಡಿದೆ.
41ರ ಹರೆಯದಲ್ಲಿಯೂ ಐಪಿಎಲ್ಗೆ (2013) ಪಾದಾರ್ಪಣೆ ಮಾಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದರು. ನಿವೃತ್ತಿಯಾಗುವ ವಯಸ್ಸಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿ ಯುವ ಆಟಗಾರರಿಗೆ ಮಾದರಿಯಾಗಿದ್ದರು. 8 ಅಕ್ಟೋಬರ್ 1971 ರಂದು ಮುಂಬೈನಲ್ಲಿ ಜನಿಸಿದ ಪ್ರವೀಣ್ ತಾಂಬೆ ಓರ್ವ ಲೆಗ್ ಸ್ಪಿನ್ನರ್.
ಶ್ರೇಯಸ್ ತಲಪಾಡೆ ಅವರು ಇತ್ತೀಚೆಗೆ ಬಿಡುಗಡೆಯಾಗಿದ್ದ ಅಲ್ಲು ಅರ್ಜುನ್ ನಟನೆಯ ಸೂಪರ್ ಡೂಪರ್ ಹಿಟ್ ಚಿತ್ರ 'ಪುಷ್ಪಾ ದಿ ರೈಸ್'ನ ಹಿಂದಿ ಆವೃತ್ತಿಗೆ ಧ್ವನಿ ನೀಡಿದ್ದಾರೆ. ಹಿಂದಿ ಭಾಷೆಯಲ್ಲಿ ಪುಷ್ಪ ಚಿತ್ರವನ್ನು ಪ್ರೀತಿಸಿದ್ದಕ್ಕಾಗಿ ಹಾಗೂ ತಮ್ಮ ಕಂಠವನ್ನು ಹಾಡಿ ಹೊಗಳಿದ್ದಕ್ಕೆ ಧನ್ಯವಾದ ಹೇಳಿದ್ದರು ಶ್ರೇಯಸ್ ತಲಪಾಡೆ.