ಕಳೆದ ವರ್ಷ ಕೊರೊನಾ ಕಾರಣದಿಂದ ಭಾರತ ಸೇರಿದಂತೆ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಲಾಕ್ಡೌನ್ ಆಗಿತ್ತು. ಈ ಸಮಯದಲ್ಲಿ ಜನಸಾಮಾನ್ಯರು, ಸೆಲಬ್ರಿಟಿಗಳು ಮನೆಯಲ್ಲೇ ಉಳಿದುಕೊಂಡಿದ್ದರು. ಈ ಸಮಯ ಕೆಲವರಿಗೆ ಶಾಪವಾದರೆ ಮತ್ತೆ ಕೆಲವರಿಗೆ ವರವಾಗಿತ್ತು ಎಂದು ಹೇಳಿದರೂ ತಪ್ಪಾಗಲಾರದು. ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಕೂಡಾ ಲಾಕ್ಡೌನ್ ಸಮಯ ನನಗೆ ಬಹಳ ಉಪಯೋಗವಾಯ್ತು ಎಂದು ಹೇಳಿಕೊಂಡಿದ್ದಾರೆ.
"ನಾವು ಏನೇ ಹೊಸ ವಿಚಾರವನ್ನು ಆರಂಭಿಸಬೇಕಾದರೂ ಶೂನ್ಯದಿಂದ ಆರಂಭಿಸುತ್ತೇವೆ. ಲಾಕ್ ಡೌನ್ ಸಮಯ ನನಗೆ ಜೀವನದಲ್ಲಿ ಎಷ್ಟೋ ಅಮೂಲ್ಯವಾದ ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯಕವಾಯ್ತು. ಸ್ವಯಂಪ್ರೇಮ, ಕುಟುಂಬ ಸದಸ್ಯರ ನಡುವಿನ ಬಾಂಧವ್ಯ, ಆಧ್ಯಾತ್ಮಿಕ ಆರೋಗ್ಯ ಎಲ್ಲವನ್ನೂ ನಾನು ಅನುಭವಿಸಿದೆ. ಅಷ್ಟೇ ಅಲ್ಲ ಈ ಸಮಯ ಮತ್ತಷ್ಟು ಸ್ವತಂತ್ರ್ಯಳನ್ನಾಗಿ ಮಾಡಿತು, ಯೋಗದ ಮಹತ್ವ ಏನು ಎಂಬುದನ್ನು ನಾನು ಈ ಸಮಯದಲ್ಲಿ ಅರ್ಥ ಮಾಡಿಕೊಂಡೆ. ಇದರಿಂದ ನಾನು ಈಗ ಯಾವುದೇ ಪ್ರಾಜೆಕ್ಟ್ಗಳ ಬಗ್ಗೆ ಸುಲಭವಾಗಿ ಗಮನ ಹರಿಸುವಂತಾಗಿದೆ. ಈ ಲಾಕ್ಡೌನ್ ಸಮಯದಲ್ಲಿ ನಾನು ಶೂನ್ಯದ ಮಹತ್ವವನ್ನು ಕೂಡಾ ಅರ್ಥ ಮಾಡಿಕೊಂಡಿದ್ದೇನೆ. ನಾನು ಒಂದು ಸಿನಿಮಾ ಒಪ್ಪಿಕೊಂಡರೆ ಮೊದಲು ನಿರ್ಮಾಪಕರ ಶ್ರಮವನ್ನು ಅರ್ಥ ಮಾಡಿಕೊಳ್ಳುತ್ತೇನೆ. ಏಕೆಂದರೆ ಅವರು ಆ ಚಿತ್ರಕ್ಕಾಗಿ ಎಷ್ಟೆಲ್ಲಾ ಕನಸು ಕಂಡಿರುತ್ತಾರೆ. ಆ ಕನಸಿನಲ್ಲಿ ನನ್ನನ್ನೂ ಭಾಗಿಯಾಗುವಂತೆ ಮಾಡುತ್ತಾರೆ. ಒಬ್ಬ ನಟಿಯಾಗಿ ನಾನು 100 ರಷ್ಟು ಶ್ರಮ ವಹಿಸುತ್ತೇನೆ. ಆದರೆ ಪ್ರತಿಫಲ ನಮ್ಮ ಕೈಯಲ್ಲಿ ಇಲ್ಲ, ಅದು ಪ್ರೇಕ್ಷಕರಿಗೆ ಬಿಟ್ಟಿದ್ದು. ಒಟ್ಟಿನಲ್ಲಿ ಲಾಕ್ಡೌನ್ ನಂತರ ನಾನು ಬಹಳ ಬದಲಾಗಿದ್ದೇನೆ" ಎಂದು ಶ್ರದ್ಧಾ ಹೇಳಿಕೊಂಡಿದ್ದಾರೆ.