ಮುಂಬೈ: ವಿವಾದಗಳ ಸುಳಿಯಲ್ಲಿ ಸಿಲುಕಿರುವ ಬಾಲಿವುಡ್ ನಟಿ ಕಂಗನಾ ರನೌತ್, ಶಿವಸೇನೆ ಸಂಸದ ಸಂಜಯ್ ರಾವತ್ ಜೊತೆಗಿನ ಕದನದ ಬಳಿಕ ಇದೀಗ ಹಿರಿಯ ನಟಿ, ಸಂಸದೆ ಜಯಾ ಬಚ್ಚನ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ, ಡ್ರಗ್ಸ್ ಹಾಗೂ ಮೂವಿ ಮಾಫಿಯಾ ವಿರುದ್ಧ ದನಿ ಎತ್ತಿರುವ ನಟಿ ಕಂಗನಾ ರನೌತ್ ಬಾಲಿವುಡ್ಅನ್ನು 'ಗಟ್ಟರ್' (ಚರಂಡಿ) ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು. ಇಂದು ನಡೆಯುತ್ತಿರುವ ರಾಜ್ಯಸಭಾ ಕಲಾಪದಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಈ ವಿಚಾರವನ್ನು ಎತ್ತಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ರಂಗದವರ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಅವರ ಹೆಸರು ಕೆಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಚಿತ್ರರಂಗ ಎಷ್ಟೋ ಜನರಿಗೆ ಹೆಸರು ಮತ್ತು ಖ್ಯಾತಿ ತಂದುಕೊಟ್ಟಿದೆ. ಆದರೂ ಅಂತವರೇ ಇದನ್ನು 'ಗಟ್ಟರ್' ಎಂದು ಕರೆಯುತ್ತಿದ್ದಾರೆ ಎಂದು ಕಂಗನಾಗೆ ಪರೋಕ್ಷವಾಗಿ ಜಯಾ ಟಾಂಗ್ ಕೊಟ್ಟಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಂಗನಾ, "ಜಯಾ ಜೀ.. ನನ್ನ ಜಾಗದಲ್ಲಿ ನಿಮ್ಮ ಮಗಳು ಶ್ವೇತಾ ಇದ್ದು, ಆಕೆಯ ಮೇಲೆ ಡ್ರಗ್ಸ್ ಆರೋಪ ಹೊರಿಸಿ, ಕಿರುಕುಳ ನೀಡಿದ್ದರೆ ನೀವು ಇದೇ ಮಾತನ್ನು ಹೇಳುತ್ತಿದ್ರಾ? ನಿಮ್ಮ ಮಗ ಅಭಿಷೇಕ್ ಬಚ್ಚನ್ ಬೆದರಿಕೆ, ಕಿರುಕುಳಕ್ಕೊಳಗಾಗಿ ನೇಣಿಗೆ ಶರಣಾಗಿದ್ದರೆ ಆಗ ಕೂಡ ಇದೇ ಮಾತು ಹೇಳುತ್ತಿದ್ರಾ? ನಮ್ಮ ಮೇಲೂ ಕರುಣೆ ತೋರಿಸಿ" ಎಂದು ಟ್ವೀಟ್ ಮಾಡಿದ್ದಾರೆ.