ಹೈದರಾಬಾದ್: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನವಾಗುತ್ತಿದ್ದಂತೆ ಅವರ ಜೊತೆ ಇನ್ನೊಬ್ಬನನ್ನು ಸಹ ಅಶ್ಲೀಲ ಚಿತ್ರ ನಿರ್ಮಿಸಿ ಹರಿಬಿಟ್ಟ ಆರೋಪದಡಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಉದ್ಯಮಿ ರಾಜ್ ಕುಂದ್ರಾ ಬಂಧನಕ್ಕೊಳಗಾಗಿದ್ದು, ಇದು ಮೊದಲೇನಲ್ಲ. ಇದಕ್ಕೂ ಮೊದಲು ಹಲವು ಬಾರಿ ಸುದ್ದಿ ವಾಹಿನಿಗಳಲ್ಲಿ ದೊಡ್ಡ ಹೆಡ್ಲೈನ್ ಆಗಿದ್ದಾರೆ.
ಐಪಿಎಲ್ ಹಗರಣದಲ್ಲೂ ಕುಂದ್ರಾ (2015)
2015ರಲ್ಲಿ ಐಪಿಎಲ್ ಪಂದ್ಯಾಟಕ್ಕೆ ಐಸಿಸಿ ಮುಖ್ಯಸ್ಥ ಎನ್ ಶ್ರೀನಿವಾಸ್ ಅಳಿಯ ಗುರುನಾಥ್ ಮಿಯಪ್ಪನ್ ಜೊತೆ ಸೇರಿ ಕುಂದ್ರಾ ಬೆಟ್ಟಿಂಗ್ ನಡೆಸಿದ್ದ ಆರೋಪ ಸಾಬೀತಾಗಿತ್ತು. ಈ ಹಿನ್ನೆಲೆ ಎಲ್ಲ ಆವೃತ್ತಿಯ ಕ್ರಿಕೆಟ್ನಿಂದ ಅವರಿಗೆ ನಿಷೇಧ ಹೇರಲಾಗಿತ್ತು. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ಬಗ್ಗೆ ದೆಹಲಿ ಪೊಲೀಸರ ತನಿಖೆಯ ಸಮಯದಲ್ಲಿ, ರಾಜ್ ಕುಂದ್ರಾ ಬುಕ್ಕಿ ಮತ್ತು ಅವರ ವ್ಯವಹಾರ ಪಾಲುದಾರ - ಸ್ನೇಹಿತ ಉಮೇಶ್ ಗೋಯೆಂಕಾ ಮೂಲಕ ಬೆಟ್ಟಿಂಗ್ ಮಾಡಲು ಒಪ್ಪಿಕೊಂಡಿದ್ದರು.
ಆದರೆ, ಫಿಕ್ಸಿಂಗ್ ನಡೆಸಿರಲಿಲ್ಲ. ಇದಾದ ನಂತರ ಅವರ ತಂಡ ರಾಜಸ್ಥಾನ್ ರಾಯಲ್ಸ್ ಎರಡು ವರ್ಷಗಳ ಕಾಲ ನಿಷೇಧಿಸಿದರೆ, 2015 ರಲ್ಲಿ ರಾಜ್ ಕುಂದ್ರಾ ಅವರನ್ನು ಐಪಿಎಲ್ನಿಂದಲೇ ನಿಷೇಧಿಸಲಾಯಿತು.
ಬಿಟ್ಕಾಯಿನ್ ಹಗರಣ (2018)
2018ರಲ್ಲಿ, 8,000 ಹೂಡಿಕೆದಾರರಿಗೆ 2000 ಸಾವಿರ ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಸಹೋದರರು ಅಮಿತ್ ಮತ್ತು ವಿವೇಕ್ ಭಾರದ್ವಾಜ್ ಅವರನ್ನು ಬಂಧಿಸಿ ಬಹು ಕೋಟಿ ರೂಪಾಯಿ ಬಿಟ್ ಕಾಯಿನ್ ದಂಧೆಗೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರನ್ನು ಹಲವಾರು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯವು ವಿಚಾರಣೆ ನಡೆಸಿತ್ತು. ಆರೋಪಿಗಳು ಸ್ಥಾಪಿಸಿದ್ದ ವೆಬ್‌ಸೈಟ್ ಗೇನ್‌ಬಿಟ್‌ಕಾಯಿನ್ ಮೂಲಕ ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡಲು ಆಮಿಷ ಒಡ್ಡಿದ್ದ ಆರೋಪವಿತ್ತು.
ಗೋಲ್ಡ್ ಹಗರಣ (2020)
ಶಿಲ್ಪಾಶೆಟ್ಟಿ ಹಾಗೂ ಪತಿ ಕುಂದ್ರಾ ವಿರುದ್ಧ 2020ರಲ್ಲಿ ಸಚಿನ್ ಜೋಶಿ ಎಂಬಾತ ವಂಚನೆ ಪ್ರಕರಣ ದಾಖಲಿಸಿದ್ದರು. ದಂಪತಿ ನೇತೃತ್ವದ ಚಿನ್ನ ವ್ಯವಹಾರ ಕಂಪನಿ ಸತ್ಯುಗ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಮೂಲಕ ಚಿನ್ನದ ಮೇಲಿನ ಹೂಡಿಕೆಯಲ್ಲಿ ಮೋಸ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು.
ಸತ್ಯುಗ್ ಗೋಲ್ಡ್ನಲ್ಲಿ ಪ್ರತಿಯೊಬ್ಬ ಗ್ರಾಹಕರ ಬೇಡಿಕೆಯನ್ನ ಸಮಯಕ್ಕೆ ಪೂರೈಸಲಾಗಿದೆ. ನಾವು 1 ಕೆಜಿ ಚಿನ್ನವನ್ನು ಠೇವಣಿ ಇಟ್ಟಿದ್ದೇವೆ. ಇದಕ್ಕಾಗಿ ಸಚಿನ್ ಜೋಶಿ ಕಾನೂನುಬದ್ಧವಾಗಿ ಅನ್ವಯವಾಗುವ ಡೆಮುರೇಜ್ ಶುಲ್ಕವನ್ನು ಇನ್ನೂ ಪಾವತಿಸಬೇಕಿದೆ. ಈ ಸರಣಿ ಡೀಫಾಲ್ಟರ್ ವಿರುದ್ಧ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣವೂ ಇದೆ. ನಾವು ಅವನಿಗೆ ಚಿನ್ನವನ್ನು ನೀಡಲು ಬಯಸದಿದ್ದರೆ, ಅದನ್ನು ನ್ಯಾಯಾಲಯದಲ್ಲಿ ಠೇವಣಿ ಇಡುವುದಿಲ್ಲ. ನ್ಯಾಯಾಲಯವು ಈಗ ಮಧ್ಯಸ್ಥಗಾರನನ್ನು ನೇಮಿಸಿದೆ, ಅಲ್ಲಿ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಕುಂದ್ರಾ ದಂಪತಿ ವಾದಿಸಿದ್ದರು.
ಪೂನಂ ಪಾಂಡೆ ದೂರು (2020)
ನಟಿ ಪೂನಂ ಪಾಂಡೆ ಕುಂದ್ರಾ ವಿರುದ್ಧ 2020ರಲ್ಲಿ ಬಾಂಬೆ ಹೈಕೋರ್ಟ್ನಲ್ಲಿ ದೂರು ದಾಖಲಿಸಿದ್ದರು. ಕುಂದ್ರಾ ಹಾಗೂ ಅವರ ಪಾರ್ಟ್ನರ್ ಜೊತೆಗಿನ ವ್ಯವಹಾರ ಒಪ್ಪಂದದ ಸಮಯ ಅಂತ್ಯವಾಗಿದ್ದರೂ ಸಹ ಕಾನೂನು ಬಾಹಿರವಾಗಿ ನನ್ನನ್ನು ಅವರ ವ್ಯವಹಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಇದನ್ನು ಕುಂದ್ರಾ ಸುಳ್ಳು ಆರೋಪ ಎಂದರಲ್ಲದೇ ನಮ್ಮ ಕಂಪನಿ ಅವರ ಜೊತೆ ಮಾಡಿಕೊಂಡಿದ್ದ ಒಪ್ಪಂದದಂತೆ ಮುಂದಿವರಿದಿದೆ ಎಂದಿದ್ದರು. ಈ ಪ್ರಕರಣದಲ್ಲಿ ಯಾವುದೇ ನೋಟಿಸ್ ಜಾರಿಯಾಗದೆ ಅಂತ್ಯಗೊಂಡಿತ್ತು.
ಮಾಜಿ ಪತ್ನಿ ವಿರುದ್ಧ ಅಕ್ರಮ ಸಂಬಂಧ ಆರೋಪ
ರಾಜ್ ಕುಂದ್ರಾ ಅವರ ಮಾಜಿ ಪತ್ನಿ ಕವಿತಾ ಅವರ ಕೆಲವು ಸಂದರ್ಶನಗಳಲ್ಲಿ ಅವರ ವಿಚ್ಛೇದನಕ್ಕೆ ಶಿಲ್ಪಾ ಶೆಟ್ಟಿ ಕಾರಣ ಎಂದು ಆರೋಪಿಸಿದ್ದರು. ಇದರ ನಂತರ ರಾಜ್ ತನ್ನ ಸಂದರ್ಶನದಲ್ಲಿ ತನ್ನ ಹೆಂಡತಿ ಕವಿತಾ ತನ್ನ ಸಹೋದರಿಯ ಗಂಡನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು ಎಂದು ಹೇಳಿಕೊಂಡಿದ್ದರು. ಈ ಸುದ್ದಿ ದೇಶಾದ್ಯಂತ ಸದ್ದು ಮಾಡಿತ್ತು.