ಸಿನಿಮಾ ನಟರು ಸದಾ ಬ್ಯುಸಿ. ಯಾವಾಗಲೂ ಶೂಟಿಂಗ್, ವರ್ಕೌಟ್, ಫಾರಿನ್ ಟ್ರಿಪ್, ಪಾರ್ಟಿ ಅಂತೆಲ್ಲಾ ಓಡಾಡಿಕೊಂಡಿರುತ್ತಾರೆ ಎನ್ನುವುದು ಬಹುತೇಕರ ನಂಬಿಕೆ. ಆದರೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇದಕ್ಕೆ ತದ್ವಿರುದ್ಧ.
ಮನೆ ಕಾಂಪೌಂಡ್ ಒಳಗೆ ಸಾವಯವ ತರಕಾರಿ ಬೆಳೆದ ಶಿಲ್ಪಾ ಶೆಟ್ಟಿ..!
ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಮೊದಲಿನಿಂದಲೂ ಯೋಗ ಮಾಡುವ ಮೂಲಕ ಆರೋಗ್ಯಕ್ಕೆ ಹೆಚ್ಚು ಗಮನ ಹರಿಸುತ್ತಾರೆ. ಇದರ ಜೊತೆಗೆ ತಮ್ಮ ಮನೆ ಕಾಂಪೌಂಡ್ ಒಳಗಿನ ಗಾರ್ಡನ್ನಲ್ಲಿ ಪಾಟ್ಗಳಲ್ಲಿ ಸಾವಯವ ತರಕಾರಿಗಳನ್ನು ಬೆಳೆಯುತ್ತಾರೆ.
ಒಂದು ಕಾಲದಲ್ಲಿಶಿಲ್ಪಾ ಶೆಟ್ಟಿ ಕಾಲ್ ಸೀಟ್ಗಾಗಿ ಬಾಲಿವುಡ್ ಫಿಲ್ಮ್ ಮೇಕರ್ಗಳು ಕಾಯುತ್ತಿದ್ದರು. ರಾಜ್ಕುಂದ್ರಾರನ್ನು ಮದುವೆಯಾದ ಮೇಲಂತೂ ಪತಿ, ಮಗನ ಆರೈಕೆಗೆ ಪ್ರಾಮುಖ್ಯತೆ ನೀಡುವ ಸಲುವಾಗಿ ಮೊದಲಿನಂತೆ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಈ ನಟಿ. ಶಿಲ್ಪಾ ಫಾರಿನ್ ಟ್ರಿಪ್, ಪಾರ್ಟಿಗಳಿಗೆ ಹೋದರೂ ಅದಕ್ಕಿಂತ ಹೆಚ್ಚಾಗಿ ತಮ್ಮ ಮನೆ ಕಡೆ ಹೆಚ್ಚಾಗಿ ಗಮನ ಹರಿಸುತ್ತಾರೆ. ಇನ್ನು ಯಾವುದೇ ಕಾರಣಕ್ಕೂ ಯೋಗ ಮಾಡುವುದನ್ನು ಮರೆಯುವುದಿಲ್ಲ ಈ ಬ್ಯೂಟಿ. ಪತಿ, ಮಗ, ತಾಯಿಗೆ ಯೋಗ ಹೇಳಿಕೊಡುತ್ತಾ ದಿನಕ್ಕೆ ಇಂತಿಷ್ಟು ಸಮಯ ಯೋಗಕ್ಕೆ ಮೀಸಲಿಟ್ಟಿದ್ದಾರೆ. ಇನ್ನು ಈ ಬಳುಕುವ ಬಳ್ಳಿ ಪ್ರತಿದಿನ ದೇವರಪೂಜೆ ಮಾಡಲು ಮಾತ್ರ ಮರೆಯುವುದಿಲ್ಲ.
ಇಷ್ಟು ಮಾತ್ರವಲ್ಲ, ತಮ್ಮ ಮನೆಯ ಮುಂಭಾಗದ ಜಾಗದಲ್ಲೇ ಬದನೆಕಾಯಿ, ಮೆಣಸಿನಕಾಯಿ, ಮೆಂತ್ಯಸೊಪ್ಪು ಸೇರಿದಂತೆ ಇನ್ನಿತರ ತರಕಾರಿಗಳನ್ನು ಬೆಳೆಯುವ ಶಿಲ್ಪಾ ಅದನ್ನು ತಾವೇ ಬಿಡಿಸಿ ಅಡುಗೆ ಕೂಡಾ ತಯಾರಿಸಿ ಮನೆಯವರಿಗೆ ಬಡಿಸುತ್ತಾರಂತೆ. ಅದೂ ಕೂಡಾ ಕೆಮಿಕಲ್ ಇಲ್ಲದ ಸಾವಯವ ತರಕಾರಿಗಳು. ಶಿಲ್ಪಾ ಶೆಟ್ಟಿ ತರಕಾರಿ ಕೀಳುತ್ತಿರುವ ಈ ವಿಡಿಯೋ ಸದ್ಯಕ್ಕೆ ವೈರಲ್ ಆಗಿದೆ. ಅಭಿಮಾನಿಗಳು ಕೂಡಾ ಶಿಲ್ಪಾರ ಈ ಕಾರ್ಯ ವೈಖರಿಗೆ ಭೇಷ್ ಹೇಳಿದ್ದಾರೆ.