ಹೈದರಾಬಾದ್: ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ವಿಕ್ರಮ್ ಬಾತ್ರಾರ ಜೀವನಾಧಾರಿತ ಚಿತ್ರ 'ಶೇರ್ ಷಾ' ಜನ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಎರಡು ಕಾರಣಗಳಿವೆ. ಅವುಗಳೆಂದರೆ ಒಂದು ಧೈರ್ಯಶಾಲಿ ಸೈನಿಕ ವಿಕ್ರಮ್ ಬಾತ್ರಾ ಅವರ ವೀರೋಚಿತ ಕಥೆ. ಇನ್ನೊಂದು ಯುದ್ಧದ ನಿರೂಪಣೆ ಜೊತೆಗೆ ಸುಂದರವಾದ ಪ್ರೇಮಕಥೆಯನ್ನು ಸಹ ಹೆಣೆದಿರುವುದು. ಇದೀಗ ಈ ಚಿತ್ರದಲ್ಲಿ ಪ್ರೇಮಕಥೆಯನ್ನು ಮುಖ್ಯವಾಗಿ ಬೆರೆಸಿರುವುದರ ಹಿಂದಿನ ಸತ್ಯಾಂಶವನ್ನು ಚಿತ್ರಕಥೆಗಾರ ಸಂದೀಪ್ ಶ್ರೀವಾಸ್ತವ್ ಬಿಚ್ಚಿಟ್ಟಿದ್ದಾರೆ.
ವಿಕ್ರಮ್ ಬಾತ್ರಾ ಡಿಂಪಲ್ ಚೀಮಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು. ಚಂಡೀಗಢದಲ್ಲಿರುವ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಎಂಎ ಇಂಗ್ಲಿಷ್ ಕೋರ್ಸ್ ಮಾಡುತ್ತಿದ್ದಾಗ ಡಿಂಪಲ್ ಸಹ ಅದೇ ತರಗತಿಯಲ್ಲಿ ಕಲಿಯುತ್ತಿದ್ದರು. ಇವರಿಬ್ಬರ ಪ್ರೇಮ ಇತರರಿಗೆ ಮಾದರಿ ಎನ್ನಬಹುದು. ಏಕೆಂದರೆ ಕಾರ್ಗಿಲ್ ಯುದ್ಧದಲ್ಲಿ ವಿಕ್ರಮ್ ಮರಣ ಹೊಂದಿದ ಬಳಿಕ ತನ್ನ ಜೀವನವನ್ನೇ ತ್ಯಾಗ ಮಾಡಿ, ಆತನ ನೆನಪಿನಲ್ಲಿಯೇ ಇಂದಿಗೂ ಜೀವನ ಕಳೆಯುತ್ತಿದ್ದಾರಂತೆ. ಇದೊಂದು ವಿಚಾರ ಇಡೀ ಸಿನಿಮಾದಲ್ಲಿ ಪ್ರೇಮಕಥೆಯನ್ನು ಮುಖ್ಯವಾಗಿ ಬಿಂಬಿಸಲು ಕಾರಣವಾಗಿದೆ ಎಂದು ಸಂದೀಪ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಡಿಂಪಲ್ ಅವರನ್ನು ಭೇಟಿಯಾಗಿ ಸಂಪೂರ್ಣ ಮಾಹಿತಿ ಪಡೆಯಲು ಚಿತ್ರತಂಡ ಪ್ರಯತ್ನಿಸಿದರೂ ವೈಯಕ್ತಿಕವಾಗಿ ಭೇಟಿಯಾಗಲು ಅವರು ಒಪ್ಪಲಿಲ್ಲ. ಆದರೆ ದೂರವಾಣಿ ಮೂಲಕ ಮಾತನಾಡಲು ಅವರು ಒಪ್ಪಿಕೊಂಡರು. ಈ ಬಳಿಕ ಅವರು ವಿಕ್ರಮ್ ಜೊತೆಗೆ ಕಳೆದ ಅಮೂಲ್ಯವಾದ ನೆನಪುಗಳನ್ನು ಚಿತ್ರತಂಡದ ಜೊತೆ ಹಂಚಿಕೊಂಡರು. ಆಶ್ಚರ್ಯ ಎಂದರೆ ಡಿಂಪಲ್, ಬಾತ್ರಾ ಜೊತೆ ಕಳೆದಿರುವುದು ಕೇವಲ 40 ದಿನಗಳು ಮಾತ್ರವಂತೆ.