2013 ರಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ ಬಾಲಿವುಡ್ ನಟಿ ಜಿಯಾಖಾನ್ ಪ್ರಕರಣ ಮತ್ತೆ ಚರ್ಚೆಯಾಗುತ್ತಿದೆ. ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್ ನನ್ನ ಅಕ್ಕನಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಜಿಯಾಖಾನ್ ಸಹೋದರಿ ಆರೋಪಿಸಿದ ಬೆನ್ನಲ್ಲೇ ನಟಿ ಶೆರ್ಲಿನ್ ಛೋಪ್ರಾ ಸಾಜಿದ್ ಖಾನ್ನಿಂದ ನನಗೂ ಅಂತ ಅನುಭವ ಆಗಿತ್ತು ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
"ಸುಮಾರು 6 ವರ್ಷಗಳ ಹಿಂದೆ ನನ್ನ ತಂದೆ ನಿಧನರಾದ ಕೆಲವು ದಿನಗಳ ನಂತರ ನಾನು ಚಿತ್ರವೊಂದರ ಬಗ್ಗೆ ಮಾತನಾಡಲು ಸಾಜಿದ್ ಖಾನ್ ಅವರನ್ನು ಭೇಟಿಯಾಗಿದ್ದೆ. ಆಗ ಅಲ್ಲಿ ಸಾಜಿದ್ ಒಬ್ಬರೇ ಇದ್ದರು. ಇದೇ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಸಾಜಿದ್ ಖಾನ್ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು. ನನಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದರು. ನಾನು ಅವರಿಗೆ ಬೈಯ್ದು ಅಲ್ಲಿಂದ ಹೊರಬಂದೆ" ಎಂದು ಶೆರ್ಲಿನ್ ಛೋಪ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.