ಹೈದರಾಬಾದ್ :ನನ್ನ ಪುತ್ರ ಅಧ್ಯಾಯನ್ ಸುಮನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುಳ್ಳು ಸುದ್ದಿಯನ್ನು ವಾಹಿನಿಯೊಂದು ವರದಿ ಮಾಡಿದೆ. ಈ ಕೂಡಲೇ ಸುದ್ದಿ ವಾಹಿನಿಯ ಪರವಾನಿಗೆ ರದ್ದುಗೊಳಿಸಬೇಕು ಎಂದು ನಟ ಶೇಖರ್ ಸುಮನ್ ಆಗ್ರಹಿಸಿದ್ದಾರೆ.
ಅಧ್ಯಾಯನ್ ಸುಮನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯನ್ನು ಝೀ ಸುದ್ದಿ ವಾಹಿನಿ ಬಿತ್ತರಿಸಿದೆ. ತಮ್ಮ ಚಾನೆಲ್‌ಗೆ ವೀಕ್ಷಕರ ಸಂಖ್ಯೆ ಹೆಚ್ಚಿಸಲು ಹಾಗೂ ಟಿಆರ್ಪಿ ಪಡೆಯಲು ಇಂತಹ ನಕಲಿ ಸುದ್ದಿ ಪ್ರಸಾರ ಮಾಡುವ ಮಟ್ಟಕ್ಕೆ ತಲುಪಿದೆ. ಅದಲ್ಲದೇ ಈ ನ್ಯೂಸ್ ಚಾನೆಲ್ ಈ ಕೃತ್ಯ ಮುಚ್ಚಿ ಹಾಕಲು ಪ್ರಯತ್ನಿಸಿದೆ. ಈ ಚಾನೆಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶೇಖರ್ ಸುಮನ್ ಕಿಡಿಕಾರಿದ್ದಾರೆ.
ನನ್ನ ಹೆಂಡತಿ ಮತ್ತು ನಾನು ಈ ಸುದ್ದಿ ನೋಡಿ ಬೆಚ್ಚಿ ಬಿದ್ದಿದ್ದೆವು. ಅಧ್ಯಾಯನ್ ದೆಹಲಿಗೆ ಹೋಗಿರುವ ವಿಷಯ ತಿಳಿದಿತ್ತು. ಅದಲ್ಲದೆ, ಆ ಸಮಯದಲ್ಲಿ ಆತನ ಫೋನ್ ಸಹ ನಾಟ್ ರೀಚಬಲ್ ಆಗಿತ್ತು. ಈ ಎಲ್ಲ ಕಾರಣದಿಂದ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಗಾಬರಿಯಾಗಿದ್ದೆವು. ಝೀ ವಾಹಿನಿ ನಮಗೆ ಅತೀವ ನೋವು ಉಂಟು ಮಾಡಿದೆ, ಕ್ಷಮಿಸಲಾಗದ ತಪ್ಪನ್ನು ಅಲ್ಲಿನ ಸಿಬ್ಬಂದಿ ಮಾಡಿದ್ದಾರೆ ಎಂದು ಶೇಖರ್ ಸುಮನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.