ಜೂನ್ 14 ರಂದು ಸಾವನ್ನಪ್ಪಿದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಮನವಿ ಮಾಡಿದ ರಿಯಾ ಚಕ್ರವರ್ತಿಯನ್ನು ನಟ ಹಾಗೂ ಕಿರುತೆರೆ ನಿರೂಪಕ ಶೇಖರ್ ಸುಮನ್ ಶ್ಲಾಘಿಸಿದ್ಧಾರೆ.
ತಮ್ಮ ಟ್ವಿಟ್ಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸುಮನ್, 'ಕೊನೆಗೂ ರಿಯಾ ಕೂಡಾ ಈ ವಿಚಾರವಾಗಿ ಧ್ವನಿ ಎತ್ತಿದ್ದು ಸಂತೋಷವಾಯ್ತು. ಈ ಬಗ್ಗೆ ಜನರು ಆಸಕ್ತಿ ತೋರುತ್ತಿದ್ದು ಇದು ಒಳ್ಳೆಯ ಬೆಳವಣಿಗೆ' ಎಂದು ಹೇಳಿದ್ದಾರೆ. ಸುಶಾಂತ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ರಿಯಾ ಚಕ್ರವರ್ತಿ ಮನವಿ ಮಾಡಿದ ಕೆಲವೇ ಗಂಟೆಗಳಲ್ಲಿ ಶೇಖರ್ ಈ ಟ್ವೀಟ್ ಮಾಡಿ ರಿಯಾ ಅವರನ್ನು ಶ್ಲಾಘಿಸಿದ್ದಾರೆ.
'ಗೌರವಾನ್ವಿತ ಅಮಿತ್ ಷಾ ಸರ್, ನಾನು ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ. ಸುಶಾಂತ್ ಸಾವನ್ನಪ್ಪಿ ಒಂದು ತಿಂಗಳು ಕಳೆದಿದೆ. ಸರ್ಕಾರ ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಒದಗಿಸುತ್ತದೆ ಎಂಬ ಭರವಸೆ ಇದೆ. ಆದರೂ ಜನರ ಒತ್ತಾಯದ ಮೇರೆಗೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ನಾನು ನಿಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ಧೇನೆ. ಸುಶಾಂತ್ ಸಾವಿನ ಹಿಂದೆ ಅಡಗಿರುವ ಸತ್ಯವನ್ನು ನಾವು ತಿಳಿಯಬೇಕು. ಆದ್ದರಿಂದ ನಾನು ಈ ಮನವಿ ಮಾಡಿಕೊಳ್ಳುತ್ತಿದ್ದೇನೆ' ಎಂದು ರಿಯಾ ಚಕ್ರವತಿ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಟ್ವೀಟ್ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶೇಖರ್, 'ಸುಶಾಂತ್ ಸಾವಿಗೆ ನ್ಯಾಯ ದೊರೆಯುವುದೆಂಬ ಭರವಸೆ ಇದೆ. ಸುಶಾಂತ್ ಸಾವಿನ ಹಿಂದಿರುವ ಅಪರಾಧಿಗಳನ್ನು ಬಯಲಿಗೆ ಎಳೆಯುವವರೆಗೂ ಹೋರಾಟ ನಿಲ್ಲುವುದಿಲ್ಲ. ಸುಶಾಂತ್ ಅವರನ್ನು ಕಳೆದುಕೊಂಡು ಅವರ ಕುಟುಂಬ ಇನ್ನೂ ನೋವು ಅನುಭವಿಸುತ್ತಿದೆ. ಸಿಬಿಐ ವಿಚಾರಕ್ಕೆ ಸಂಬಂಧಿಸಿದಂತೆ ಸುಶಾಂತ್ ಕುಟುಂಬ ಮೌನವಾಗಿದೆ. ಆದರೆ ಅವರ ಹಿಂದೆ ನಾವು ಇದ್ಧೇವೆ. ಸುಶಾಂತ್ ಸಾವಿಗೆ ನ್ಯಾಯ ದೊರೆಯುವವರೆಗೂ ನಾವು ಬಿಡುವುದಿಲ್ಲ' ಎಂದು ಶೇಖರ್ ಟ್ವೀಟ್ ಮಾಡಿದ್ದಾರೆ.
ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಶವ ಮುಂಬೈನ ಬಾಂದ್ರಾದ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಂದಿನಿಂದ ದೇಶಾದ್ಯಂತ ಬಾಲಿವುಡ್ನಲ್ಲಿ ಸ್ವಜನಪಕ್ಷಪಾತ ಹಾಗೂ ಸುಶಾಂತ್ ಸಾವಿನ ಕುರಿತು ಚರ್ಚೆ ನಡೆಯುತ್ತಲೇ ಇದೆ. ಇದೀಗ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಎಲ್ಲೆಡೆ ಒತ್ತಾಯ ಕೇಳಿಬರುತ್ತಿದೆ.