ಮುಂಬೈ:ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಆರ್ಥರ್ ರಸ್ತೆ ಜೈಲು ಸೇರಿ ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆದಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಜೈಲಿನಿಂದ ಬಿಡುಗಡೆಯಾಗಬಹುದು ಎಂದು ಜೈಲಿನ ಅಧಿಕಾರಿ ತಿಳಿಸಿದ್ದಾರೆ.
ಆರ್ಯನ್ ಖಾನ್ ಜೈಲಿನಿಂದ ಬಿಡುಗಡೆಗಾಗಿ ಬಾಂಬೆ ಹೈಕೋರ್ಟ್ ನಿನ್ನೆ ತನ್ನ ಆಪರೇಟಿವ್ ಆದೇಶವನ್ನು ಲಭ್ಯಗೊಳಿಸಿದ್ದು, ಒಂದು ಲಕ್ಷ ವೈಯಕ್ತಿಕ ಬಾಂಡ್ ಹಾಗೂ ಪಾಸ್‌ಪೋರ್ಟ್ ಒಪ್ಪಿಸುವುದು ಸೇರಿದಂತೆ 14 ಷರತ್ತುಗಳನ್ನು ಐದು ಪುಟಗಳ ಆದೇಶ ಪ್ರತಿಯಲ್ಲಿ ಸೂಚಿಸಿತ್ತು.
ಶಾರುಖ್ ಪುತ್ರ ಆರ್ಯನ್ ಖಾನ್ ಇಂದು ಜೈಲಿನಿಂದ ಬಿಡುಗಡೆ ಭಾಗ್ಯ ಆರ್ಯನ್ ಖಾನ್ ಮತ್ತು ಅವರ ಇಬ್ಬರು ಸಹ ಆರೋಪಿಗಳಾದ ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ಅವರೂ ಸಹ ತಲಾ ಒಂದು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಅಥವಾ ಇಬ್ಬರ ಶ್ಯೂರಿಟಿಯೊಂದಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೈಕೋರ್ಟ್ ಹೇಳಿತ್ತು.
ಹೈಕೋರ್ಟ್ ನಿಗದಿಪಡಿಸಿದ ಷರತ್ತುಗಳ ಪ್ರಕಾರ, ಮೂವರು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ತಮ್ಮ ಪಾಸ್‌ಪೋರ್ಟ್‌ಗಳನ್ನು ಸಲ್ಲಿಸಬೇಕು. ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆಯದೇ ಭಾರತವನ್ನು ತೊರೆಯಬಾರದು. ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಗೆ ಹಾಜರಾಗಬೇಕು ಎಂದು ಷರತ್ತುಬದ್ಧ ಜಾಮೀನನನ್ನು ಹೈಕೋರ್ಟ್ ಮಂಜೂರು ಮಾಡಿದೆ.
ನಿನ್ನೆ ಮಧ್ಯಾಹ್ನ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎನ್ ಡಬ್ಲ್ಯೂ ಸಾಂಬ್ರೆ ಅವರು ಆಪರೇಟಿವ್ ಆದೇಶದ ಪ್ರತಿಗೆ ಸಹಿ ಹಾಕಿದ್ದಾರೆ. ಇದು ಆರ್ಯನ್ ಖಾನ್ ಅವರ ವಕೀಲರಿಗೆ ಸಂಜೆಯ ವೇಳೆಗೆ ತಲುಪಿತ್ತು. ಈಗಾಗಲೇ ಮುಂಬೈನ ಆರ್ಥರ್ ರೋಡ್ ಜೈಲು ಅಧಿಕಾರಿಗಳಿಗೆ ಜಾಮೀನು ಪ್ರತಿ ತಲುಪಿದ್ದು, ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕ ಆರ್ಯನ್ ಖಾನ್ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗುವುದು. ಸುಮಾರು ಬೆಳಗ್ಗೆ 10 ರಿಂದ 12 ಗಂಟೆಯೊಳಗೆ ಆರ್ಯನ್ ಖಾನ್ ಜೈಲಿನಿಂದ ಬಿಡುಗಡೆಗೊಳಿಸಲಾಗುವುದು ಎಂದು ಜೈಲಾಧಿಕಾರಿ ನಿತಿನ್ ವೈಚಲ್ ಹೇಳಿದ್ದಾರೆ.
ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ಡ್ರಗ್ ದಾಳಿಯ ಸಂದರ್ಭದಲ್ಲಿ ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ಅಧಿಕಾರಿಗಳು ಅಕ್ಟೋಬರ್ 2 ರಂದು ಬಂಧಿಸಿದ್ದರು. ಅಕ್ಟೋಬರ್ 8 ರಿಂದ ಅರ್ಥರ್ ಜೈಲಿನಲ್ಲಿರುವ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಸಾಂಬ್ರೆ ಅವರಿದ್ದ ಏಕ ಸದಸ್ಯ ಪೀಠವು ಜಾಮೀನು ಮಂಜೂರು ಮಾಡಿತ್ತು.