ಬಾಲಿವುಡ್ ಬಾದ್ ಷಾ ಎಂದೇ ಹೆಸರಾದ ಶಾರುಖ್ ಖಾನ್ ಇಂದು 55ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶಾರುಖ್ ಖಾನ್ಗೆ ಬಾಲಿವುಡ್ ಸೆಲಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ. ನಿನ್ನೆ ಸಂಜೆಯಿಂದಲೇ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಮೆಚ್ಚಿನ ನಟನಿಗೆ ಶುಭ ಕೋರಲು ಆರಂಭಿಸಿದ್ದಾರೆ.
ಶಾರುಖ್ ಖಾನ್ 55ನೇ ಹುಟ್ಟುಹಬ್ಬ ಚಿತ್ರರಂಗಕ್ಕೆ ಬರಿಗೈಯಲ್ಲಿ ಬಂದು ದೊಡ್ಡ ಮಟ್ಟಿನ ಯಶಸ್ಸು, ಹಣ ಗಳಿಸಿದ ನಟರಲ್ಲಿ ಶಾರುಖ್ ಖಾನ್ ಕೂಡಾ ಒಬ್ಬರು. ನವದೆಹಲಿಯಲ್ಲಿ ಹುಟ್ಟಿ ಬೆಳೆದ ಶಾರುಖ್ ಚಿತ್ರರಂಗದಲ್ಲಿ ಕರಿಯರ್ ಆರಂಭಿಸಿಸಲು ಮುಂಬೈಗೆ ಬಂದರು. 'ಫೌಜಿ' ಧಾರಾವಾಹಿ ಮೂಲಕ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದ ಅವರು, ನಂತರ ದಿಲ್ ದರಿಯಾ, ವಾಗ್ಲೇ ಕಿ ದುನಿಯಾ, ಸರ್ಕಸ್, ದೂಸರಾ ಕೇವಲ್, ಈಡಿಯಟ್ ಸೇರಿ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದರು.
'ದಿವಾನ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಶಾರುಖ್ ಖಾನ್ ಮೊದಲ ಚಿತ್ರದಲ್ಲಿ ಫಿಲ್ಮ್ ಫೇರ್ ಉತ್ತಮ ನಟ ಪ್ರಶಸ್ತಿ ಪಡೆದರು. ಬಾಜಿಗರ್, ಡರ್, ಕರಣ್ ಅರ್ಜುನ್, ಡಿಡಿಎಲ್ಜೆ, ದಿಲ್ ತೊ ಪಾಗಲ್ ಹೈ, ದಿಲ್ ಸೆ, ಬಾದ್ ಷಾ, ಮೊಹಬತೆ, ಅಶೋಕ, ದೇವ್ದಾಸ್, ಕಭಿ ಖುಷಿ ಕಭಿ ಗಮ್, ಮೇ ಹೂ ನ, ಕಭಿ ಅಲ್ವಿದನಾ ಕೆಹನಾ, ಡಾನ್ ಸೇರಿ ಅನೇಕ ಹಿಟ್ ಸಿನಿಮಾಗಳನ್ನು ಶಾರುಖ್ ಖಾನ್ ಬಾಲಿವುಡ್ಗೆ ನೀಡಿದ್ದಾರೆ. ಫಿಲ್ಮ್ ಫೇರ್ ಅವಾರ್ಡ್ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಶಾರುಖ್ ನಿರೂಪಣೆ ಕೂಡಾ ಮಾಡಿದ್ದಾರೆ.
ಕಾಲೇಜು ದಿನಗಳಲ್ಲೇ ಗೌರಿಯನ್ನು ಪ್ರೀತಿಸುತ್ತಿದ್ದ ಶಾರುಖ್ ಖಾನ್ ಹಿರಿಯರ ಒಪ್ಪಿಗೆ ಪಡೆದು 1991 ರಲ್ಲಿ ಮದುವೆಯಾದರು. ಈ ದಂಪತಿಗೆ ಈಗ ಆರ್ಯನ್ ಖಾನ್, ಸುಹಾನಾ ಖಾನ್ ಹಾಗೂ ಅಬ್ರಾಂ ಖಾನ್ ಎಂಬ ಮೂವರು ಮಕ್ಕಳಿದ್ದಾರೆ. ಶಾರುಖ್ ಸದ್ಯಕ್ಕೆ ಸೆಲ್ಯೂಟ್, ಡಾನ್-3, ರಾ ಒನ್ -2 , ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದ ಸಿನಿಮಾ ಸೇರಿ ಸುಮಾರು 7-8 ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.