ಮುಂಬೈ: ಬಾಲಿವುಡ್ ಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರ ಬಹು ಚರ್ಚಿತ ಚಿತ್ರ ಗಂಗೂಬಾಯಿ ಕಥಿಯಾವಾಡಿ ಇದೇ ಫೆ.25 ರಂದು ದೇಶಾದ್ಯಂತ ನೇರವಾಗಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಆದರೆ, ಚಿತ್ರ ತೆರೆಗೆ ಕೆಲವೇ ದಿನಗಳು ಬಾಕಿ ಇದ್ದು ಗಂಗೂಬಾಯಿ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾಗಿದೆ.
ನನ್ನ ತಾಯಿಯ ನಿಜವಾದ ಕಥೆ ಅಲ್ಲ: ಚಿತ್ರದ ಬಗ್ಗೆ ಮೊದಲಿನಿಂದಲೂ ಅಪಸ್ವರ ಕೇಳಿಬರುತ್ತಿದ್ದು, ಈ ಬಗ್ಗೆ ಇಂದು ಈಟಿವಿ ಭಾರತದ ಜೊತೆ ಮಾತನಾಡಿದ ಗಂಗೂಬಾಯಿ ಅವರ ಪುತ್ರಿ ಬಬಿತಾ ಗೌಡ ಹಾಗೂ ಮೊಮ್ಮಗ ವಿಕಾಸ್ ಗೌಡ ಆಕ್ರೋಶ ಹೊರ ಹಾಕಿದ್ದಾರೆ. ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಹಣದ ಆಸೆಗಾಗಿ ಗಂಗೂಬಾಯಿ ಅವರ ನಿಜವಾದ ಕಥೆಯನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ.
ಗಂಗೂಬಾಯಿ ಕಥಿಯಾವಾಡಿ ಕುಟುಂಬಸ್ಥರು ನನ್ನ ತಾಯಿ ಯಾರನ್ನೂ ಕೀಳು ಭಾಷೆಯಲ್ಲಿ ನಿಂದಿಸಿಲ್ಲ. ಎಲ್ಲರೂ ಅವಳನ್ನು ಗಂಗೂ ಮಾ ಎಂದೇ ಕರೆಯುತ್ತಿದ್ದರು/ತ್ತಾರೆ. ಅವರನ್ನು ಜನರು ಸಹ ಅದೇ ಹೆಸರಿನಿಂದ ಈಗಲೂ ಗುರುತಿಸುತ್ತಾರೆ. ಇವರು ಮಾಡಿಕೊಂಡಿರುವ ಕಲ್ಪನೆಯಂತೆ ನನ್ನ ತಾಯಿ ಹಾಗಿರಲಿಲ್ಲ. ಇದು ನನ್ನ ತಾಯಿಯ ನಿಜವಾದ ಕಥೆ ಅಲ್ಲ. ಅವರನ್ನು ತೇಜೋವಧೆ ಮಾಡುವ ಪ್ರಯತ್ನವಿದು ಎಂದಿದ್ದಾರೆ.
ಇತರರ ತಾಯಿಯನ್ನು ಗೌರವಿಸಲಿ:ಬನ್ಸಾಲಿ ತಮ್ಮ ತಾಯಿಯ ಹೆಸರನ್ನು ತಮ್ಮ ಹೆಸರಿನಲ್ಲಿ ಸೇರಿಸಿಕೊಂಡಿದ್ದಾರೆ. ತಮ್ಮ ತಾಯಿಗೆ ಹೆಚ್ಚಿನ ಗೌರವವನ್ನು ನೀಡುತ್ತಾರೆ ಎಂಬುದೇ ಇದರ ಅರ್ಥ. ಆದರೆ, ಅವರು ಇನ್ನೊಬ್ಬರ ತಾಯಿಗೆ ಗೌರವವನ್ನು ನೀಡುವುದನ್ನು ಮರೆತಿದ್ದಾರೆ. ಕೇವಲ ಹಣದಾಸೆಗೆ ನೈಜ ಕಥೆಯೆನ್ನು ತಿರುಚಿದ್ದಾರೆ ಎಂದು ಗಂಗೂಬಾಯಿ ಮೊಮ್ಮಗ ವಿಕಾಸ್ ಗೌಡ ಆರೋಪಿಸಿದ್ದಾರೆ.
ತನ್ನ ತಾಯಿಯ ಹೆಸರನ್ನು ಹೊಂದಿರುವ ಈ ಚಿತ್ರವು ಮತ್ತು ಅವರ ಹೆಸರಿನ ಪುಸ್ತಕದಿಂದ ಅಧ್ಯಾಯವೊಂದನ್ನು ತೆಗೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಗಂಗೂಬಾಯಿ ಅವರನ್ನು ವೇಶ್ಯೆ ಮತ್ತು ಮಾಫಿಯಾ ರಾಣಿ ಎಂದು ಚಿತ್ರದ ಟ್ರೇಲರ್‌ನಲ್ಲಿ ತೋರಿಸುವ ಮೂಲಕ ನಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ. ಚಿತ್ರ ಬಿಡುಗಡೆಯಾದ ಬಳಿಕ ಜನರು ನಮ್ಮನ್ನು ಹೇಗೆ ನೋಡುತ್ತಾರೆ ಎನ್ನುವುದನ್ನು ಯೋಚಿಸಬೇಕು ಎಂದಿದ್ದಾರೆ.
ಗಂಗೂಬಾಯಿ ಕಥಿಯಾವಾಡಿ ಕುಟುಂಬಸ್ಥರು ಗಂಗೂ ಮಾ ಹೇಗಿದ್ದರು ಗೊತ್ತಾ?ನನ್ನ ತಾಯಿ ಲೈಂಗಿಕ ವ್ಯವಹಾರಕ್ಕೆ ಯಾರನ್ನೂ ನೇಮಿಸಲಿಲ್ಲ. ಬದಲಾಗಿ, ಅವರು ಅನೇಕ ಲೈಂಗಿಕ ಕಾರ್ಯಕರ್ತೆಯರ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಿದರು. ಈ ವ್ಯವಹಾರದಿಂದ ಹೊರಬರಲು ಅವರು ಅನೇಕರಿಗೆ ಸಹಾಯ ಮಾಡಿದ್ದಾರೆ. ಅನೇಕ ಮಹಿಳೆಯರನ್ನು ಮದುವೆ ಮಾಡಿಸಿದ್ದಾರೆ.
ಚಿನ್ನದ ಬಳೆ ಸೇರಿದಂತೆ ಚಿನ್ನದ ಗುಂಡಿಗಳು ಮತ್ತು ಚಿನ್ನದ ಸರ ಹೊಂದಿರುವ ರವಿಕೆಯನ್ನು ಧರಿಸುತ್ತಿದ್ದರು. ಆದರೆ, ಟ್ರೇಲರ್‌ನಲ್ಲಿ ನನ್ನ ತಾಯಿಯನ್ನು ವೇಶ್ಯೆಯನ್ನಾಗಿ ಪರಿವರ್ತಿಸಲಾಗಿದೆ. ಈ ಮೂಲಕ ನಮ್ಮ ಗೌರವಕ್ಕೆ ಈ ಚಿತ್ರದ ಮೂಲಕ ಕಪ್ಪು ಮಸಿ ಬಳಿಯಲಾಗುತ್ತಿದೆ ಎಂದು ಮತ್ತೊಬ್ಬ ಮೊಮ್ಮಗಳಾದ ಬಬಿತಾ ಗೌಡ ಅಜ್ಜಿ ಹೇಗಿದ್ದರು ಎನ್ನುವುದರ ಬಗ್ಗೆ ವಿವರಣೆ ನೀಡಿದ್ದಾರೆ.
ಕಥಿಯಾವಾಡಿಯಿಂದ ಕಾಮಾಟಿಪುರಕ್ಕೆ:ಗಂಗೂಬಾಯಿ ಬಾಲಿವುಡ್‌ನಲ್ಲಿ ನಟಿಯಾಗಬೇಕೆಂದು ಬಯಸಿದ್ದರು. ಅವರು ತಮ್ಮ ಕುಟುಂಬದ ಮ್ಯಾನೇಜರ್ ಜೊತೆಗೆ ಮುಂಬೈಗೆ ಬಂದಿದ್ದರು. ಆ ಸಮಯದಲ್ಲಿ ಅವರ ಕುಟುಂಬ ಶ್ರೀಮಂತವಾಗಿತ್ತು. ಆದರೆ, ಆಕೆಯ ಮ್ಯಾನೇಜರ್ ಆಕೆಯನ್ನು ವಂಚಿಸಿ ಕಾಮಾಟಿಪುರದಲ್ಲಿ ಮಾರಾಟ ಮಾಡಿದರು. ಅನಿವಾರ್ಯ ಕಾರಣದಿಂದ ಅವರು ಅಲ್ಲಿಯೇ ಜೀವನ ಸಾಗಿಸಬೇಕಾಯಿತು.
ಈಟಿವಿ ಭಾರತದ ಜೊತೆ ಮಾತನಾಡುತ್ತಿರುವ ಗಂಗೂಬಾಯಿ ಕಥಿಯಾವಾಡಿ ಕುಟುಂಬಸ್ಥರು ಗಂಗೂಬಾಯಿ ಮತ್ತು ಮಾಜಿ ಪ್ರಧಾನಿ ನೆಹರು ನಂಟು:ಚಿತ್ರ ಘೋಷಣೆಯಾದ ಬಳಿಕ ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಮತ್ತು ಗಂಗೂಬಾಯಿ ನಡುವಿನ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವದಂತಿಗಳು ಹರಿದಾಡತೊಡಗಿವೆ. ಆದರೆ, ಈ ವದಂತಿಗಳೆಲ್ಲ ಸತ್ಯಕ್ಕೆ ದೂರವಾದವು ಎಂದು ಮೊಮ್ಮಗ ವಿಕಾಸ್ ಗೌಡ ಹೇಳಿದ್ದಾರೆ.
ನನ್ನ ಅಜ್ಜಿ ಬೇರೆಯೇ ಇದ್ದರು. ಕಾಮಠಿಪುರದ ಜನರಿಗೆ ಸಹಾಯ ಮಾಡಲು ಮುಂದೆ ಬರುತ್ತಿದ್ದಳು. ಆಗ ಕಾಮಾಟಿಪುರ ಪ್ರದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಸಂಬಂಧಿಸಿದಂತೆ ಪ್ರಧಾನಿ ನೆಹರು ಕಚೇರಿಗೆ ಹಲವು ದೂರುಗಳು ಬಂದಿದ್ದವು. ಈ ದೂರುಗಳನ್ನು ಪ್ರಧಾನಿ ಗಂಭೀರವಾಗಿ ಪರಿಗಣಿಸಿದ್ದರು. ಅವರು ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದರು.
ಲೈಂಗಿಕ ಕಾರ್ಯಕರ್ತೆಯರಿಗೆ ಪುನರ್ವಸತಿ ಕಲ್ಪಿಸಿ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಆ ಸಮಯದಲ್ಲಿ ಅವರ ಕಚೇರಿ ನನ್ನ ಅಜ್ಜಿಯನ್ನು ಸಂಪರ್ಕಿಸಿತ್ತು. ಆಕೆಯನ್ನು ದೆಹಲಿಯ ಕಚೇರಿಗೂ ಕರೆಸಲಾಯಿತು. ಈ ಮಾತುಕತೆಯ ಸಮಯದಲ್ಲಿ ನನ್ನ ಅಜ್ಜಿ ಮತ್ತು ನೆಹರು ಅವರ ನಡುವೆ ಕೆಲವು ಮಾತುಕತೆಯಾಗಿದ್ದು ನಿಜ ಎಂದು ಇತಿಹಾಸ ತಿಳಿಸಿದರು.
ಆದರೆ, ಇಷ್ಟೆಲ್ಲ ಆರೋಪಗಳ ಮತ್ತು ಅಪಸ್ವರದ ಬಳಿಕವೂ ಅವರ ಜಿವನಾಧಾರಿತ ಚಿತ್ರ ಗಂಗೂಬಾಯಿ ಕಥಿಯಾವಾಡಿ ಇದೇ ಫೆ.25 ರಂದು ದೇಶಾದ್ಯಂತ ತೆರೆ ಕಾಣಲು ಸಿದ್ಧತೆ ಮಾಡಿಕೊಂಡಿದೆ. ಚಿತ್ರದಲ್ಲಿ ಗಂಗೂಬಾಯಿ ಕಥಿಯಾವಾಡಿ ಅವರ ಪಾತ್ರವಕ್ಕೆ ನಟಿ ಆಲಿಯಾ ಭಟ್ ಜೀವ ತುಂಬಿದ್ದಾರೆ.