ಹೈದರಾಬಾದ್: ಕೊರೊನಾದಿಂದ ತಂದೆಯನ್ನು ಕಳೆದುಕೊಂಡ ಕರ್ನಾಟಕದ ಯುವ ವಿದ್ಯಾರ್ಥಿಗೆ ನೆರವು ನೀಡಲು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಮುಂದಾಗಿದ್ದಾರೆ.
ವೆಬ್‌ಲಾಯ್ಡ್ ವರದಿಯ ಪ್ರಕಾರ, ಕರ್ನಾಟಕದ 18 ವರ್ಷದ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದ. ಈ ವಿಚಾರವನ್ನು ತಿಳಿದ ಯುವಸೇನೆ ನಾಯಕ ರಾಹುಲ್ ಎಸ್. ಕನಲ್ ನಟ ಸಲ್ಮಾನ್ ಗಮನಕ್ಕೆ ತಂದಿದ್ದಾರೆ. ಕನಲ್ ಅವರು ಸಲ್ಮಾನ್ ಅವರ 'ಬೀಂಗ್ ಹಂಗ್ರಿ ಫುಡ್ ಟ್ರಕ್'ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಬಳಿಕ ಸಲ್ಮಾನ್ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಕನಲ್, "ನಾವು ಅವರಿಗೆ ಪಡಿತರ ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸಿದ್ದೇವೆ. ನಾವು ಅವರ ಸುಧಾರಣೆಗೆ ಬೇಕಾದದ್ದನ್ನು ಒದಗಿಸುತ್ತೇವೆ. ಸಲ್ಮಾನ್ ಅವರ ಅಭಿಮಾನಿಗಳ ಕುಟುಂಬವು ಇತರರಿಗೆ ಸಹಾಯ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ. ಸಲ್ಮಾನ್ ಸಹಾಯ ಮಾಡುವಂತೆ ತಿಳಿಸಿದ್ದಾರೆ. ಅವನ ಪ್ರತಿಯೊಂದು ಬೇಡಿಕೆಯನ್ನು ಸಹ ಈಡೇರಿಸುತ್ತೇವೆ " ಎಂದಿದ್ದಾರೆ.
ಸಲ್ಮಾನ್ ಖಾನ್ ಕೊರೊನಾ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ 'ಬೀಂಗ್ ಹಂಗ್ರಿ ಫುಡ್ ಟ್ರಕ್'ಅನ್ನು ಸ್ಥಾಪಿಸಿದ್ದಾರೆ. ತಮ್ಮ ಚೀನಿ ರೆಸ್ಟೋರೆಂಟ್ ಭಾಯ್ ಜಾನ್ ಕಿಚನ್ ಮೂಲಕ ಆಹಾರ ಒದಗಿಸುವ ಕಾರ್ಯ ಮಾಡುತ್ತಿದ್ದಾರೆ. ಪ್ರಸ್ತುತ ಕನಿಷ್ಠ 5,000 ಮಂದಿ ಮುಂಚೂಣಿ ಕಾರ್ಮಿಕರಿಗೆ ಆಹಾರ ಸೇವೆ ಒದಗಿಸಲಾಗಿದೆ.