ಜೋಧಪುರ (ರಾಜಸ್ಥಾನ):ಕೃಷ್ಣ ಮೃಗಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧಪುರ ನ್ಯಾಯಾಲಯ ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದು, ಇದರ ವಿರುದ್ಧ ಬಾಲಿವುಡ್ ನಟ ಸಲ್ಮಾನ್ ಖಾನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ತಾನು ವರ್ಚುವಲ್ ಆಗಿ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕೆಂದು ಸಲ್ಮಾನ್ ಖಾನ್ ರಾಜಸ್ಥಾನ ಹೈಕೋರ್ಟ್ಗೆ ಮನವಿ ಪತ್ರ ಸಲ್ಲಿಸಿದ್ದು, ಮುಂಬೈನಿಂದ ವರ್ಚುವಲ್ ಆಗಿ ಹಾಜರಾಗಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ.
ಜೋಧಪುರ ಜಿಲ್ಲಾ ಮತ್ತು ಸೆಷೆನ್ಸ್ ಕೋರ್ಟ್ ಫೆಬ್ರವರಿ 6ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಈ ಸೂಚನೆ ವಿರುದ್ಧ ಸಲ್ಮಾನ್ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ :ಬ್ಯಾಕ್ ಡೋರ್ ಮೂಲಕ ದೆಹಲಿಯಲ್ಲಿ ಅಧಿಕಾರ ನಡೆಸಲು ಕೇಂದ್ರ ಪ್ರಯತ್ನ: ಸಿಸೋಡಿಯಾ
ರಾಜಸ್ಥಾನ ಹೈಕೋರ್ಟ್ನ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮೊಹಾಂತಿ ಮತ್ತು ನ್ಯಾಯಮೂರ್ತಿ ದಿನೇಶ್ ಮೆಹ್ತಾ ಸಲ್ಮಾನ್ ಅರ್ಜಿಯನ್ನು ವಿಚಾರಣೆಗೆ ಒಪ್ಪಿಕೊಂಡಿದ್ದು, ರಾಜಸ್ಥಾನ ಸರ್ಕಾರ ಮತ್ತು ಸಂಬಂಧ ಪಟ್ಟ ಕೇಂದ್ರ ಸರ್ಕಾರದ ಇಲಾಖೆಯಿಂದ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ.
ಶುಕ್ರವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ನಿರ್ದೇಶನ ನೀಡಲಾಗಿದ್ದು, ಸಲ್ಮಾನ್ ಅರ್ಜಿಯ ವಿಚಾರಣೆ ಅಂದೇ ನಡೆಯಲಿದೆ.
1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಜೋಧ್ಪುರದ ಕಂಕಣಿ ಗ್ರಾಮದ ಬಳಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಿಚಾರಣೆ ನಡೆಯುತ್ತಿದೆ.