ಮುಂಬೈ: ಕೊರೊನಾ ಸೋಂಕನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವಂತೆ ಹಾಗೂ ಕೇಂದ್ರ ಸರ್ಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ತನ್ನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರ ಸರ್ಕಾರದ ನಿರ್ದೇಶನ ಪಾಲಿಸಿ: ಸಲ್ಮಾನ್ ಖಾನ್
ಪ್ರಧಾನಿ ಮೋದಿಯ ಜನತಾ ಕರ್ಫ್ಯೂಗೆ ಬಾಲಿವುಡ್ನ ಅನೇಕ ಕಲಾವಿದರು ಬೆಂಬಲ ಸೂಚಿಸಿದ್ದಾರೆ. ಈಗ ಸಲ್ಮಾನ್ ಖಾನ್ ಕೂಡಾ ಬೆಂಬಲ ಸೂಚಿಸಿದ್ದು ಯಾವುದೇ ಕಾರಣಕ್ಕೂ ಸರ್ಕಾರ ಸೂಚಿಸಿರುವ ನಿಯಮಗಳನ್ನು ಉಲ್ಲಂಘಿಸಬಾರದೆಂದು ಮನವಿ ಮಾಡಿದ್ದಾರೆ.
ಇನ್ಸ್ಟಾಗ್ರಾಂ ವಿಡಿಯೋವನ್ನು ಹರಿಬಿಟ್ಟಿರುವ ಸಲ್ಮಾನ್ ಖಾನ್ ''ಕೊರೊನಾ ಸೋಂಕಿನ ಕುರಿತು ವದಂತಿಗಳನ್ನು ಹಬ್ಬಿಸಬೇಡಿ. ಈ ವದಂತಿಗಳು ಎಲ್ಲರಿಗೂ ಸಮಸ್ಯೆಯಾಗುತ್ತವೆ. ಯಾರಿಗೆ ಬೇಕಾದರೂ ವೈರಸ್ ಸೋಂಕುನ ತಗುಲಬಹುದು. ಬಸ್, ರೈಲು, ಮಾರುಕಟ್ಟೆ ಸ್ಥಳಗಳಲ್ಲಿ ಈ ಸೋಂಕು ಹರಡಬಹುದು. ಆದರಿಂದ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ. ಮನೆಯಲ್ಲಿಯೇ ಇದ್ದು ಸೋಂಕಿನಿಂದ ಕಾಪಾಡಿಕೊಳ್ಳಿ'' ಎಂದಿದ್ದಾರೆ.
ಇದರ ಜೊತೆಗೆ ಮನೆಯಲ್ಲಿರಿ ಎಂದರೆ ರಜಾ ದಿನ ಎಂಬ ಅರ್ಥವಿಲ್ಲ, ತಾವೂ ಸುರಕ್ಷಿತವಾಗಿದ್ದು ಬೇರೆಯವರನ್ನೂ ಸುರಕ್ಷಿತವಾಗಿಡಿ. ಮಾಸ್ಕ್ ಧರಿಸಿ, ನಿಯಮಿತವಾಗಿ ಕೈತೊಳೆಯಿರಿ, ಸ್ವಚ್ಛವಾಗಿರಿ ಎಂದಿದ್ದಾರೆ. 14 ಗಂಟೆಗಳ ಕಾಲ ಪ್ರಧಾನಿ ಮೋದಿ ನೀಡಿರುವ ಜನತಾ ಕರ್ಫ್ಯೂ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ. ಈ ಹಿಂದೆ ಬಾಲಿವುಡ್ನ ಹಲವು ಕಲಾವಿದರು ಪ್ರಧಾನಿಯ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ್ದರು. ಈಗ ಸಲ್ಮಾನ್ ಖಾನ್ ಕೂಡಾ ಮೋದಿ ನಡೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.