ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್ಆರ್ಆರ್' ಸಿನಿಮಾ ಹಾಗೂ ಬೋನಿ ಕಪೂರ್ ನಿರ್ಮಾಣದ 'ಮೈದಾನ್' ಸಿನಿಮಾ ಬಿಡುಗಡೆ ದಿನಾಂಕ ಕ್ಲ್ಯಾಷ್ ಆಗುತ್ತಿದ್ದು ಈ ಬಗ್ಗೆ ಬೋನಿ ಕಪೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರ್ಆರ್ಆರ್ ಅಕ್ಟೋಬರ್ 13 ರಂದು ಹಾಗೂ ಮೈದಾನ್ ಅಕ್ಟೋಬರ್ 15 ರಂದು ಬಿಡುಗಡೆಯಾಗುತ್ತಿದ್ದು, ಆರ್ಆರ್ಆರ್ ಮುಂದೆ ಮೈದಾನ್ ಸಿನಿಮಾ ಹಿನ್ನಡೆ ಅನುಭವಿಸುವ ಭಯ ಬೋನಿ ಕಪೂರ್ ಅವರಿಗೆ ಕಾಡುತ್ತಿದೆ ಎನ್ನಲಾಗುತ್ತಿದೆ.
"ಮೈದಾನ್ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲು ಸಾಧ್ಯವಿಲ್ಲ. ಈ ಚಿತ್ರದಲ್ಲಿ ಅಜಯ್ ದೇವಗನ್ ನಾಯಕನಾಗಿ ನಟಿಸಿದ್ದರೆ, ಆರ್ಆರ್ಆರ್ ಚಿತ್ರದಲ್ಲಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಜಯ್ ದೇವಗನ್ ಮಧ್ಯಸ್ಥಿಕೆಯಲ್ಲಿ ರಾಜಮೌಳಿ ಅವರನ್ನು ಸಂಪರ್ಕಿಸಿ ಸಿನಿಮಾ ಬಿಡುಗಡೆ ದಿನಾಂಕವನ್ನು ಬದಲಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೆಲ್ಲಾ ರಾಜಮೌಳಿಯ ತಂತ್ರಗಾರಿಕೆ ಹಾಗೂ ಬೆದರಿಸುವ ಪ್ರಯತ್ನ ಅಷ್ಟೇ" ಎಂದು ಬೋನಿ ಕಪೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 'ಬಾಹುಬಲಿ' ಚಿತ್ರದ ಶಿವಗಾಮಿ ಪಾತ್ರಕ್ಕೆ ರಾಜಮೌಳಿ, ಶ್ರೀದೇವಿ ಅವರನ್ನು ಸಂಪರ್ಕಿಸಿದ್ದರು. ಆದರೆ ಶ್ರೀದೇವಿ ಹೆಚ್ಚು ಸಂಭಾವನೆಗೆ ಬೇಡಿಕೆ ಇಟ್ಟಿದ್ದರಿಂದ ಅವರನ್ನು ಕೈ ಬಿಟ್ಟು ರಮ್ಯಕೃಷ್ಣನ್ ಅವರನ್ನು ಚಿತ್ರಕ್ಕೆ ಕರೆತರಲಾಯ್ತು. ಶ್ರೀದೇವಿ ಶಿವಗಾಮಿ ಪಾತ್ರವನ್ನು ನಿರಾಕರಿಸಿದ ಕಾರಣದಿಂದಲೇ ರಾಜಮೌಳಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಬೋನಿ ಕಪೂರ್ ಕೂಡಾ ಇದೇ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಆರೋಪದಲ್ಲಿ ಹುರುಳಿಲ್ಲ, ರಾಜಮೌಳಿಗೆ ಆ ರೀತಿ ಉದ್ದೇಶವಿಲ್ಲ ಎಂದು ಮತ್ತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.