ನಿನ್ನೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್ರಾವ್ ದೇಶ್ಮುಖ್ ಅವರ 75ನೇ ಜನ್ಮದಿನ. ಅಪ್ಪನ ಜನ್ಮದಿನದಂದು ಪುತ್ರ, ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಸುಂದರ ವಿಡಿಯೋವೊಂದನ್ನು ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದರೆ ಯಾರಿಗಾದರೂ ಒಂದು ಕ್ಷಣ ಕಣ್ಣಂಚು ಒದ್ದೆಯಾಗುವುದು ಖಂಡಿತ.
ರಿತೇಶ್ ದೇಶ್ಮುಖ್ ಅವರಿಗೆ ಈಗ 41 ವರ್ಷ ವಯಸ್ಸು. ಆದರೆ ಅಪ್ಪನ ಜನ್ಮದಿನದಂದು ಅವರನ್ನು ನೆನೆದು ಪುಟ್ಟ ಮಗುವಿನಂತೆ ಕಣ್ಣೀರಿಟ್ಟಿದ್ದಾರೆ. ಹ್ಯಾಂಗರ್ನಲ್ಲಿ ಇರಿಸಲಾಗಿದ್ದ ವಿಲಾಸ್ ರಾವ್ ದೇಶ್ಮುಖ್ ಅವರ ಕುರ್ತಾ ತೋಳಿನ ಒಳಗೆ ತಮ್ಮ ಕೈಗಳನ್ನು ಸೇರಿಸಿದ ರಿತೇಶ್, ತಂದೆಯೇ ನನ್ನನ್ನು ಅಪ್ಪಿಕೊಂಡು ಮುದ್ದಾಡುವಂತೆ, ತಂದೆಯೇ ತನ್ನನ್ನು ಸಂತೈಸುತ್ತಿರುವಂತೆ ಭಾವಿಸಿಕೊಂಡು ಭಾವುಕರಾಗಿದ್ದಾರೆ. 'ಅಗ್ನಿಪಥ್' ಚಿತ್ರದ ಸೋನು ನಿಗಮ್ ಹಾಡಿರುವ 'ಅಭಿ ಮುಜ್ ಮೆ ಕಹಿ' ಎಂಬ ಸುಂದರವಾದ ಹಾಡಿನೊಂದಿಗೆ ಈ ವಿಡಿಯೋ ಸೇರಿಸಿ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ಧಾರೆ. 'ಹ್ಯಾಪಿ ಬರ್ತಡೇ ಪಪ್ಪಾ, ನಿಮ್ಮನ್ನು ಪ್ರತಿದಿನ ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಕ್ಯಾಪ್ಷನ್ ನೀಡಿದ್ದಾರೆ.