ಮುಂಬೈ:ಕ್ಯಾನ್ಸರ್ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಿವುಡ್ನ ಹಿರಿಯ ನಟ ರಿಷಿ ಕಪೂರ್ ಮುಂಬೈ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಮುಂಬೈನ ಹೆಚ್ಎನ್ ರಿಲಾಯನ್ಸ್ ಆಸ್ಪತ್ರೆಗೆ ಅವರನ್ನು ನಿನ್ನೆ ರಾತ್ರಿ ದಾಖಲು ಮಾಡಲಾಗಿತ್ತು.
ಕಳೆದ ಫೆಬ್ರವರಿಯಲ್ಲಿ ಎರಡು ಸಲ ಆಸ್ಪತ್ರೆಗೆ ದಾಖಲಾಗಿದ್ದ ರಿಷಿ ಕಪೂರ್ ಚೇತರಿಸಿಕೊಂಡು ಮನೆಗೆ ತೆರಳಿದ್ದರು. ಏಪ್ರಿಲ್ 2ರಿಂದಲೂ ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ ಕಪೂರ್ ಕಳೆದ ಕೆಲ ದಿನಗಳ ಹಿಂದೆ ಲೈಸನ್ಸ್ ಇರುವ ಬಾರ್, ವೈನ್ ಶಾಪ್ ತೆರೆಯಲು ಅನುಮತಿ ನೀಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಟ್ವೀಟ್ ಮೂಲಕ ಮನವಿ ಮಾಡಿದರು. ಜತೆಗೆ ಭಾರತದಲ್ಲಿ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿ ಎಂದಿದ್ದರು.
'ಬಾಬಿ' ಮೂಲಕ ನಾಯಕ ನಟನಾಗಿ ಬಣ್ಣದ ಲೋಕದಲ್ಲಿ ಕಲರವ:
1952ರ ಸೆಪ್ಟೆಂಬರ್ 4ರಂದು ಮುಂಬೈನಲ್ಲಿ ಜನಿಸಿದ ಇವರು, 1970 ರಲ್ಲಿ 'ಮೇರಾ ನಾಮ್ ಜೋಕರ್' ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಪಡೆದುಕೊಂಡಿದ್ದರು. ರಿಷಿ ಕಪೂರ್ 1973ರಲ್ಲಿ ತಯಾರಾದ ಪ್ರಸಿದ್ಧ ಸಿನಿಮಾ 'ಬಾಬಿ' ಮೂಲಕ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಾರೆ.
100ಕ್ಕೂ ಹೆಚ್ಚು ಚಿತ್ರಗಳಲ್ಲಿ ಮನೋಜ್ಞ ನಟನೆ:
ನೂರು ಚಿತ್ರಗಳಲ್ಲಿ ಕಾಣಿಸಿಕೊಂಡ ಇವರು ಯುವ ನಟಿಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಹಮ್ ತುಮ್ (2004) ಮತ್ತು ಫನ್ನಾ (2006)ದಲ್ಲಿ ಪೋಷಕ ಪಾತ್ರದೊಂದಿಗೆ ನಟಿಸಿದ್ದಾರೆ. 1998ರಲ್ಲಿ ರಾಜೇಶ್ ಖನ್ನಾ, ಐಶ್ವರ್ಯಾ ರೈ, ಅಕ್ಷಯ್ ಖನ್ನಾ, ಖಾದರ್ ಖಾನ್, ಪರೇಶ್ ರಾವಲ್ ಮತ್ತು ಜಸ್ಪಾಲ್ ಭಟ್ಟಿ ನಟನೆಯ ಅಬ್ ಲೌಟ್ ಚಲೇ ಸಿನಿಮಾ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ನಮಸ್ತೆ ಲಂಡನ್ ಮತ್ತು ಇಂಗ್ಲೀಷ್ -ಭಾಷೆಯ ಸಿನಿಮಾ ಡೋನ್ಟ್ ಸ್ಟಾಪ್ ಡ್ರೀಮಿಂಗ್ನಲ್ಲಿ ಇತ್ತೀಚೆಗೆ ನಟನೆ ಮಾಡಿದ್ದರು.
ಮೇರಾ ನಾಮ್ ಜೋಕರ್ಗಾಗಿ ಬಿಎಫ್‌ಜೆಎ ವಿಶೇಷ ಪ್ರಶಸ್ತಿ ಲಭಿಸಿದ್ದು, ಇದೇ ಚಿತ್ರದಲ್ಲಿನ ಉತ್ತಮ ನಟನೆಗಾಗಿ ಬಾಲ ನಟ ನ್ಯಾಷನಲ್ ಫಿಲ್ಮ್ ಪ್ರಶಸ್ತಿ ಸಿಕ್ಕಿದೆ. 1973 -ರಲ್ಲಿ ಬಾಬಿ ಸಿನಿಮಾಗಾಗಿ ಫಿಲ್ಮ್ ಫೇರ್‌ನ ಉತ್ತಮ ನಟ ಪ್ರಶಸ್ತಿ, 2010ರಲ್ಲಿ ಲವ್ ಆಜ್ ಕಲ್ನಲ್ಲಿ ಉತ್ತಮ ಪೋಷಕ ಪಾತ್ರಕ್ಕಾಗಿ ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಲಭಿಸಿದೆ.